ಮ್ಯಾಂಚೆಸ್ಟರ್(ಆ.12): ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಸಭ್ಯ ಭಾಷೆ ಬಳಿಸಿದ ತಪ್ಪಿಗಾಗಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಪಂದ್ಯದ 15% ಸಂಭಾವನೆಯನ್ನು ದಂಡ ಕಟ್ಟಲು ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಸೂಚಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂದೆಯಿಂದ ದಂಡ ಹಾಕಿಸಿಕೊಂಡ ಮೊದಲ ಕ್ರಿಕೆಟಿಗ ಎನ್ನುವ ಕುಖ್ಯಾತಿಗೆ ಸ್ಟುವರ್ಟ್ ಬ್ರಾಡ್ ಭಾಜನರಾಗಿದ್ದಾರೆ.

ಸ್ಟುವರ್ಟ್ ಬ್ರಾಡ್ ಲೆವಲ್ 1 ಹಂತದ ಪ್ರಮಾದ ಎಸಗಿರುವುದು ಕಂಡುಬಂದಿದ್ದು, ಇದಕ್ಕಾಗಿ ಒಂದು ಡಿ ಮೆರಿಟ್ ಅಂಕವನ್ನು ಪಡೆದುಕೊಂಡಿದ್ದಾರೆ. ಸ್ಟುವರ್ಟ್ ಬ್ರಾಡ್ ಐಸಿಸಿ ನಿಯಮಾವಳಿಯ ಆರ್ಟಿಕಲ್ 2.5 ಉಲ್ಲಂಘಿಸಿರುವುದು ಖಚಿತವಾಗಿದೆ.ಆರ್ಟಿಕಲ್ 2.5 ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ವಿಕೆಟ್ ಪಡೆದ ಬಳಿಕ ಅಸಭ್ಯ ಭಾಷೆ ಅಥವಾ ಆಕ್ರಮಣಕಾರಿ ವರ್ತನೆ ತೋರುವ ಮೂಲಕ ಕರೆಳಿಸುವಂತೆ ಮಾಡಿದರೆ ಐಸಿಸಿ ಅಂತಹ ಆಟಗಾರರಿಗೆ ದಂಡ ವಿಧಿಸುತ್ತದೆ.

ಯಾವಾಗ ನಡೆದ ಘಟನೆ: 
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನ ನಾಲ್ಕನೇ ದಿನದಾಟದ 46ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಸ್ಟುವರ್ಟ್ ಬ್ರಾಡ್ ಪಾಕಿಸ್ತಾನದ ಯಾಸಿರ್ ಶಾ ವಿಕೆಟ್ ಪಡೆದ ಬಳಿಕ ಅಸಭ್ಯ ಪದ ಬಳಕೆ ಮಾಡಿದ್ದರು. ಪಂದ್ಯ ಮುಕ್ತಾಯದ ಬಳಿಕ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಶಿಕ್ಷೆಗೆ ತಲೆಬಾಗುವುದಾಗಿ ತಿಳಿಸಿದ್ದಾರೆ.

ಪಾಕ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್..!

ಕಳೆದ ಕೆಲ ವಾರಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಪಡೆದಾಗಲೂ ಕ್ರಿಸ್ ಬ್ರಾಡ್ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪದ ಬಳಕೆ ಬಗ್ಗೆ ಎಚ್ಚರವಿರಲಿ ಮಗನೇ ಎಂದು ದಂಡ ವಿಧಿಸಿ ಬುದ್ದಿ ಹೇಳಿದ್ದಾರೆ .