ಲಂಡನ್(ಆ.10): ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧದ ಉಳಿದೆರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಬೆನ್‌ ಸ್ಟೋಕ್ಸ್ ಹೊರಗುಳಿದಿರುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾನುವಾರ(ಆ.09) ಖಚಿತ ಪಡಿಸಿದೆ.

ಕಳೆದ ವರ್ಷ ಕ್ರಿಸ್‌ ಮಸ್‌ಗೂ ಎರಡು ದಿನ ಮುಂಚೆ ಬೆನ್ ಸ್ಟೋಕ್ಸ್ ತಂದೆ ಗೆಡ್ ಗಂಭೀರ್ ಕಾಯಿಲೆಯಿಂದಾಗಿ ಜೊಹಾನ್ಸ್‌ಬರ್ಗ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿತ್ತು. 

ನ್ಯೂಜಿಲೆಂಡ್‌ನ ರಗ್ಬೀ ಮಾಜಿ ಆಟಗಾರರಾಗಿದ್ದ ಗೆಡ್ ಸ್ಟೋಕ್ಸ್ 37 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಮೂರು ಶಸ್ತ್ರಕ್ರಿಯೆಗಳಿಗೆ ಒಳಗಾಗಿದ್ದರು. ಆರಂಭದಲ್ಲಿ ಇವರ ಸ್ಥಿತಿ ಚಿಂತಾಜನಕ ಎಂದು ಹೇಳಲಾಗುತ್ತಿತ್ತು. ಆದರೆ ಆ ಬಳಿಕ ಸುಧಾರಿಸಿಕೊಂಡಿದ್ದರು. ನಂತರ ನ್ಯೂಜಿಲೆಂಡ್‌ಗೆ ವಾಪಾಸಾಗಿ ಗುಣಮುಖಾವಾಗುತ್ತಿದ್ದರು. ತಂದೆಯ ಇಂತಹ ಪರಿಸ್ಥಿತಿಯ ನಡುವೆಯೇ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು.

ಬೆನ್ ಸ್ಟೋಕ್ಸ್ ಈ ವಾರಾಂತ್ಯದಲ್ಲಿ ಲಂಡನ್‌ನಿಂದ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಆಗಸ್ಟ್ 13 ಹಾಗೂ 21ರಂದು ಆರಂಭವಾಗಲಿರುವ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎದುರಾಳಿ ತಂಡಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ ಸುರೇಶ್ ರೈನಾ..!

ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದರು, 12 ವರ್ಷದವರಿದ್ದಾಗ ಅವರ ತಂದೆ ಗೆಡ್ ರಗ್ಬಿ ಕೋಚ್ ಆಗಿ ಇಂಗ್ಲೆಂಡ್‌ಗೆ ಬಂದಿದ್ದರಿಂದ ಸ್ಟೋಕ್ಸ್ ಕೂಡಾ ಇಂಗ್ಲೆಂಡ್‌ಗೆ ಬಂದರು. ವರ್ಕಿಂಗ್‌ಟನ್ ರಗ್ಬಿ ಲೀಗ್ ಕ್ಲಬ್ ಪರ ಗೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಕೋಚ್‌ ಕೆಲಸದ ಅವಧಿ ಮುಗಿದ ಬಳಿಕ ಗೆಡ್ ಹಾಗೂ ಪತ್ನಿ ದೇಬ್ ನ್ಯೂಜಿಲೆಂಡ್‌ಗೆ ತೆರಳಿದರು. ಆದರೆ ಬೆನ್ ಸ್ಟೋಕ್ಸ್ ಮಾತ್ರ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡರು. ಬೆನ್ ಸ್ಟೋಕ್ಸ್ ಇದೀಗ ಇಂಗ್ಲೆಂಡ್ ಪಾಲಿನ ದಿಗ್ಗಜ ಆಲ್ರೌಂಡರ್‌ಗಳ ಸಾಲಿಗೆ ಸೇರಿದ್ದು, 2019ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಏಕಾಂಗಿ ಹೋರಾಟ ನಡೆಸುವ ಮೂಲಕ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
 
ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ತಂಡವು ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.