Asianet Suvarna News Asianet Suvarna News

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಮೊಣಕೈ ಸರ್ಜರಿ; ಭಾರತ ವಿರುದ್ದದ ಸರಣಿಗೆ ಡೌಟ್..!

* ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌

* ಭಾರತ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವುದು ಅನುಮಾನ

* ಈಗಾಗಲೇ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ಆರ್ಚರ್‌

 

England Pacer Jofra Archer to undergo elbow surgery Seems Doubtful for India Test Series kvn
Author
London, First Published May 21, 2021, 5:24 PM IST

ಲಂಡನ್‌(ಮೇ.21): ಇಂಗ್ಲೆಂಡ್‌ ಮಾರಕ ವೇಗಿ ಜೋಫ್ರಾ ಆರ್ಚರ್‌ ಇಂದು(ಮೇ.21) ಬಲ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಆಗಸ್ಟ್‌ 04ರಿಂದ ಭಾರತ ವಿರುದ್ದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಆರ್ಚರ್‌ ಹೊರಬೀಳುವ ಸಾಧ್ಯತೆ ಬಹುತೇಕ ದಟ್ಟವಾಗತೊಡಗಿದೆ.

ಜೋಫ್ರಾ ಆರ್ಚರ್‌ ಈಗಾಗಲೇ ನ್ಯೂಜಿಲೆಂಡ್‌ ವಿರುದ್ದ ತವರಿನಲ್ಲಿ ನಡೆಯುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಜೋಫ್ರಾ ಆರ್ಚರ್‌ ಬಲ ಮೊಣಕೈನಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆರ್ಚರ್‌ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ.

26 ವರ್ಷದ ಬಾರ್ಬಡೋಸ್‌ ಮೂಲದ ವೇಗಿ, ಇತ್ತೀಚೆಗಷ್ಟೇ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸೆಸೆಕ್ಸ್‌ ಪರ ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಆದರೆ ಮತ್ತೆ ಬಲಗೈನಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ಸಲಹೆ ಪಡೆದು, ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದ ವೇಗಿ ಜೋಫ್ರಾ ಆರ್ಚರ್‌..!

ಜೋಫ್ರಾ ಆರ್ಚರ್‌ ಎಷ್ಟು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ಕುರಿತಂತೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯದಲ್ಲೇ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದೇವೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿ ಮಾತ್ರವಲ್ಲದೇ ಇಂಗ್ಲೆಂಡ್‌ ತಂಡವು, ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ದ ಕೂಡಾ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಬಹುನಿರೀಕ್ಷಿತ 2021ನೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ. ಒಂದು ವೇಳೆ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಟಿ20 ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದೆ, ಪರಿಸ್ಥಿತಿ ಬಿಗಡಾಯಿಸಿದರೆ ಟೂರ್ನಿ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ.
 

Follow Us:
Download App:
  • android
  • ios