ಲಂಡನ್(ಮೇ.17): ಇಂಗ್ಲೆಂಡ್‌ ಕ್ರಿಕೆಟ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್‌, ಮುಂಬರುವ ನ್ಯೂಜಿಲೆಂಡ್ ವಿರುದ್ದ ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಿಂದ ಹೊರಬಿದ್ದಿದ್ದಾರೆ. ಎಲ್ಬೋ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್‌ಗೆ ಗಾಯದ ಸಮಸ್ಯೆಯೇ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಕಂಟಕವಾಗುವ ಸಾಧ್ಯತೆಯಿದೆ.

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್‌ ಆರ್ಚರ್‌ ಸದ್ಯ ಕೌಂಟಿ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಸಸೆಕ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು, ಕೆಂಟ್‌ ವಿರುದ್ದದ ಪಂದ್ಯದ ಕೊನೆಯ ದಿನದಾಟ(ಮೇ.16)ದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ(ಇಸಿಬಿ)ಯು ಜೋಫ್ರಾ ಆರ್ಚರ್‌ ಬಲಗೈ ಎಲ್ಬೋ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಾರ್ಬೊಡಾಸ್ ಮೂಲದ ಆರ್ಚರ್‌ ಕೆಂಟ್ ವಿರುದ್ದ ಸೆಸೆಕ್ಸ್‌ ಪರ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಬಳಿಸಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಆರ್ಚರ್‌ ಕೇವಲ 5 ಓವರ್‌ ಬೌಲಿಂಗ್‌ ಮಾಡಲಷ್ಟೇ ಶಕ್ತರಾದರು. ಈ ಮೊದಲು ಜೋಫ್ರಾ ಆರ್ಚರ್‌ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ದದ 3 ಪಂದ್ಯಗಳ ಏಕದಿನ ಸರಣಿ ಹಾಗೂ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದರು.

ಐಪಿಎಲ್‌ ಭಾಗ-2: ಇಂಗ್ಲೆಂಡ್‌ ಕ್ರಿಕೆಟಿಗರು ಅಲಭ್ಯ?

ಜೋಫ್ರಾ ಆರ್ಚರ್ ಇದೇ ಜನವರಿ ತಿಂಗಳಿನಲ್ಲಿ ಮನೆಯಲ್ಲಿಯೇ ಫಿಶ್ ಟ್ಯಾಂಕ್ ಕ್ಲೀನ್‌ ಮಾಡುವಾಗ ಜಾರಿ ಬಿದ್ದು ಕೈ ಬೆರಳು ಮುರಿದುಕೊಂಡಿದ್ದರು. ಬಳಿಕ ಮಾರ್ಚ್‌ನಲ್ಲಿ ಕೈಬೆರಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ಬಳಿಕ ಭಾರತ ಪ್ರವಾಸದಲ್ಲಿ ಟೆಸ್ಟ್ ಹಾಗೂ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. ಬಳಿಕ ನಡೆದ 3 ಪಂದ್ಯಗಳ ಏಕದಿನ ಸರಣಿಯಿಂದ ಜೋಫ್ರಾ ಆರ್ಚರ್‌ ಹೊರಗುಳಿದಿದ್ದರು.

ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂನ್‌ 02ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್‌ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನ ಆತಿಥ್ಯವನ್ನು ವಹಿಸಲಿದೆ.