ಮ್ಯಾಂಚೆ​ಸ್ಟರ್(ಜು.18)‌: ಆರಂಭಿಕ ಬ್ಯಾಟ್ಸ್‌ಮನ್‌ ಡೊಮಿ​ನಿಕ್‌ ಸಿಬ್ಲಿ (120) ಹಾಗೂ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ (172*) ಅಮೋಘ ಶತ​ಕದ ನೆರ​ವಿ​ನಿಂದ, ವೆಸ್ಟ್‌ಇಂಡೀಸ್‌ ವಿರು​ದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌  9 ವಿಕೆಟ್ ಕಳೆದುಕೊಂಡು 469 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ವಿಂಡೀಸ್ ಪಡೆ ಒಂದು ವಿಕೆಟ್ ಕಳೆದುಕೊಂಡು 32 ರನ್ ಗಳಿಸಿದೆ

ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿ​ಸಿದ್ದ ಇಂಗ್ಲೆಂಡ್‌, 2ನೇ ದಿನ ಭರ್ಜರಿ ಬ್ಯಾಟಿಂಗ್‌ ನಡೆ​ಸಿತು. ಸಿಬ್ಲಿ ಹಾಗೂ ಸ್ಟೋಕ್ಸ್‌ ವಿಂಡೀಸ್ ಎದುರು ದಿಟ್ಟ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 340ರ ಗಡಿ ದಾಟಿಸಿತು. ಚಹಾ ವಿರಾ​ಮದ ವೇಳೆಗೆ ಇಂಗ್ಲೆಂಡ್‌ 5 ವಿಕೆಟ್‌ ನಷ್ಟಕ್ಕೆ 378 ರನ್‌ ಗಳಿ​ಸಿತ್ತು. 

ಇಂಗ್ಲೆಂಡ್‌ಗೆ ಭದ್ರ ಬುನಾದಿ ಹಾಕಿದ ಸ್ಟೋಕ್ಸ್-ಸಿಬ್ಲಿ ದಿಟ್ಟ ಬ್ಯಾಟಿಂಗ್

ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಸಿಬ್ಲಿ 372 ಎಸೆತಗಳಲ್ಲಿ ಕೇವಲ 5 ಬೌಂಡರಿ ಸಹಿತ 120 ರನ್ ಗಳಿಸಿದರು, ಮತ್ತೊಂದು ತುದಿಯಲ್ಲಿ ಆಲ್ರೌಂಡರ್ ಬೆನ್ ಸ್ಟೋಕ್ಸ್ 356 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 176 ರನ್ ಗಳಿಸಿದರು. ಕೊನೆಯಲ್ಲಿ ಜೋಸ್ ಬಟ್ಲರ್ 40 ಹಾಗೂ ಡಾಮ್ ಬೆಸ್ 31 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 450ರ ಗಡಿ ದಾಟಿಸಿದರು.

ವಿಂಡೀಸ್ ಪರ ರೋಸ್ಟನ್ ಚೇಸ್ 5 ವಿಕೆಟ್ ಒಡೆದರೆ, ಕೀಮರ್ ರೋಚ್ 2, ಅಲ್ಜೆರಿ ಜೋಸೆಫ್ ಹಾಗೂ ಜೇಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ವಿಂಡೀಸ್ ಆರಂಭದಲ್ಲೇ ಜಾನ್ ಕ್ಯಾಂಬೆಲ್ ವಿಕೆಟ್ ಕಳೆದುಕೊಂಡಿದೆ. ಇದೀಗ ಕ್ರೇಗ್ ಬ್ರಾಥ್‌ವೇಟ್(6) ಹಾಗೂ ನೈಟ್ ವಾಚ್‌ಮನ್ ಅಲ್ಜೆರಿ ಜೋಸೆಫ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ

ಸ್ಕೋರ್‌: ಇಂಗ್ಲೆಂಡ್‌: 469/9 ಡಿಕ್ಲೇರ್

ವೆಸ್ಟ್ ಇಂಡೀಸ್: 32/1(ಎರಡನೇ ದಿನದಾಟದಂತ್ಯಕ್ಕೆ)