ಮ್ಯಾಂಚೆ​ಸ್ಟರ್(ಜು.17)‌: ವಿಂಡೀಸ್‌ ವಿರು​ದ್ಧ ಗುರು​ವಾರ ಇಲ್ಲಿ ಆರಂಭಗೊಂಡ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಅರಂಭಿಕ ಬ್ಯಾಟ್ಸ್‌ಮನ್‌ ಡೊಮಿ​ನಿಕ್‌ ಸಿಬ್ಲಿ ಹಾಗು ಬೆನ್ ಸ್ಟೋಕ್ಸ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡ 3 ವಿಕೆಟ್ ಕಳೆದುಕೊಂಡು 207 ರನ್ ಬಾರಿಸಿ ಬೃಹತ್ ಮೊತ್ತದತ್ತ ದಾಪುಗಾಲು ಹಾಕುವ ಮುನ್ಸೂಚನೆ ನೀಡಿದೆ 

ಮಳೆಯಿಂದಾಗಿ ಪಂದ್ಯ ಒಂದೂ​ವರೆ ಗಂಟೆ ತಡ​ವಾಗಿ ಆರಂಭ​ಗೊಂಡಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿ​ಸ​ಲ್ಪಟ್ಟ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿತು. ವಿಂಡೀಸ್ ಆಲ್ರೌಂಡರ್ ರೋಸ್ಟನ್ ಚೇಸ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಕೆರಿಬಿಯನ್ ಪಡೆಗೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟರು. ಈ ವೇಳೆ ಇಂಗ್ಲೆಂಡ್ ಕೇವಲ 29 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಸಿಬ್ಲಿ ಜತೆ ನಾಯಕ ಜೋ ರೂಟ್ ಅರ್ಧಶತಕದ ಜತೆಯಾಟ ನಿಭಾಯಿಸಿದರು. ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದ ರೂಟ್(23ರನ್, 49 ಎಸೆತ) ಅಲ್ಜೆರಿ ಜೋಸೆಫಗ ಬೌಲಿಂಗ್‌ನಲ್ಲಿ ಹೋಲ್ಡರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮೊದಲ ದಿನದ ಚಹಾ ವಿರಾ​ಮಕ್ಕೆ 3 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿ​ಸಿತ್ತು. 

ವಿಂಡೀಸ್ ವಿರುದ್ಧ 2ನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ಗೆ ಶಾಕ್..!

ಬಲ ತುಂಬಿದ ಸ್ಟೋಕ್ಸ್-ಸಿಬ್ಲಿ ಬ್ಯಾಟಿಂಗ್: ರೂಟ್ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ತಂಡ ನೂರು ರನ್‌ಗಳ ಗುರಿ ಮುಟ್ಟಲು ಇನ್ನೂ 19 ರನ್‌ಗಳ ಅಗತ್ಯವಿತ್ತು. ಆದರೆ ಆಲ್ರೌಂಡರ್ ಸ್ಟೋಕ್ಸ್(59*) ಹಾಗೂ ಡೋಮಿನಿಕ್ ಸಿಬ್ಲಿ(86*) ನೆಲಕಚ್ಚಿ ಆಡುವ ಮೂಲಕ ತಂಡವನ್ನು ಇನ್ನೂರರ ಗಡಿ ದಾಟಿಸಿದ್ದಾರೆ. ಮಾತ್ರವಲ್ಲ ದಿನದಾಟದ ಅಂತ್ಯದವರೆಗೂ ವಿಕೆಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ದಿನದಾಟದಲ್ಲಿ ವಿಂಡೀಸ್ ಬೌಲರ್‌ಗಳು ಬಹುಬೇಗನೇ ವಿಕೆಟ್ ಕಬಳಿಸದಿದ್ದರೆ ಪಂದ್ಯ ಕೈತಪ್ಪಿ ಹೋಗುವುದು ಗ್ಯಾರಂಟಿ.

ಸ್ಕೋರ್‌: ಇಂಗ್ಲೆಂಡ್‌ : 207/3(ಮೊದಲ ದಿನದಾಟದ ಅಂತ್ಯಕ್ಕೆ)