ಲಂಡನ್‌(ಫೆ.16): ಫೆಬ್ರವರಿ 24ರಿಂದ ಅಹಮದಾಬಾದ್‌ನ ಸರ್ದಾರ್ ಪಟೇಲ್ ಮೈದಾನದಲ್ಲಿ ಭಾರತ ವಿರುದ್ದ ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯಕ್ಕೆ 17 ಆಟಗಾರರನ್ನೊಳಗೊಂಡ ಇಂಗ್ಲೆಂಡ್‌ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆ ಜಾನಿ ಬೇರ್‌ಸ್ಟೋವ್‌ ಹಾಗೂ ಮಾರ್ಕ್‌ ವುಡ್‌ ತಂಡ ಕೂಡಿಕೊಂಡಿದ್ದಾರೆ.

ಆದರೆ ಅಚ್ಚರಿಯ ಸಂಗತಿ ಎನ್ನುವಂತೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ ಹಾಗೂ 18 ಎಸೆತಗಳಲ್ಲಿ ಸ್ಫೋಟಕ 43 ರನ್‌ ಚಚ್ಚಿದ ಮೋಯಿನ್ ಅಲಿಗೆ ಮೂರನೇ ಟೆಸ್ಟ್‌ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಇನ್ನು ಎರಡನೇ ಟೆಸ್ಟ್‌ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದು ಇಂಗ್ಲೆಂಡ್‌ ವೇಗಿಗಳಾದ ಜೇಮ್ಸ್‌ ಆಂಡರ್‌ಸನ್ ಹಾಗೂ ಜೋಫ್ರಾ ಆರ್ಚರ್‌ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ತಂಡ ಕೂಡಿಕೊಂಡಿದ್ದಾರೆ.

ಚೆನ್ನೈ ಟೆಸ್ಟ್‌: ಇಂಗ್ಲೆಂಡ್‌ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಸಮಬಲ

ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ವಿರುದ್ದ ಇಂಗ್ಲೆಂಡ್‌ ತಂಡವು 317 ರನ್‌ಗಳ ಭಾರೀ ಅಂತರದ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಈ ಗೆಲುವಿನೊಂದಿಗೆ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ 1-1ರ ಸಮಬಲ ಸಾಧಿಸಿದೆ. ಭಾರತ ನೀಡಿದ್ದ 482 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 164 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿದೆ.

3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಜೋ ರೂಟ್‌(ನಾಯಕ), ಜೇಮ್ಸ್ ಆಂಡರ್‌ಸನ್‌, ಜೋಫ್ರಾ ಆರ್ಚರ್‌, ಜಾನಿ ಬೇರ್‌ಸ್ಟೋವ್‌, ಡೋಮಿನಿಕ್‌ ಬೆಸ್‌, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್‌, ಜಾಕ್‌ ಕ್ರಾವ್ಲಿ, ಬೆನ್ ಫೋಕ್ಸ್, ಡೇನಿಯಲ್ ಲಾರೆನ್ಸ್‌, ಜಾಕ್ ಲೀಚ್, ಓಲಿ ಪೋಪ್‌, ಡಾಮ್‌ ಸಿಬ್ಲಿ, ಬೆನ್ ಸ್ಟೋಕ್ಸ್‌, ಓಲಿ ಸ್ಟೋನ್‌, ಕ್ರಿಸ್ ವೋಕ್ಸ್, ಮಾರ್ಕ್‌ ವುಡ್‌.