ಟೆಸ್ಟ್ ವೀಕ್ಷಿಸಲು 10 ತಿಂಗಳು ಲಂಕಾದಲ್ಲೇ ಉಳಿದ ಫ್ಯಾನ್..!
ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ವೀಕ್ಷಿಸಲು ಆಗಮಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗೆ ನಿರಾಸೆ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಗಾಲೆ(ಜ.15): ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ವೀಕ್ಷಿಸಲು 10 ತಿಂಗಳ ಹಿಂದೆ ಲಂಕಾಗೆ ಆಗಮಿಸಿದ್ದ ಇಂಗ್ಲೆಂಡ್ ಅಭಿಮಾನಿ ರಾಬ್ ಲೆವಿಸ್‌ಗೆ ಭಾರೀ ನಿರಾಸೆ ಉಂಟಾಗಿದೆ. ಕೋವಿಡ್ ಭೀತಿಯಿಂದಾಗಿ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಲೆವೆಸ್ ಹೊರಗುಳಿಯಬೇಕಾಗಿ ಬಂದಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿರುವ ಅವರು ಕ್ರೀಡಾಂಗಣದೊಳಗೆ ಬಿಡುವಂತೆ ಮನವಿ ಮಾಡಿದ್ದಾರೆ. ಉಭಯ ತಂಡಗಳ ನಡುವೆ ಸರಣಿ 2020ರ ಮಾರ್ಚ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಸೋಂಕು ಹಬ್ಬಲು ಶುರುವಾದ ಕಾರಣ ಸರಣಿಯನ್ನು ಮುಂದೂಡಲಾಗಿತ್ತು.
ಬ್ರಿಸ್ಬೇನ್ ಟೆಸ್ಟ್: ಟೀಂ ಇಂಡಿಯಾದಿಂದ ಉತ್ತಮ ಆರಂಭ
ಕಳೆದ ಮಾರ್ಚ್‌ನಲ್ಲೇ ಲಂಕಾಗೆ ಆಗಮಿಸಿದ್ದ ಲೆವಿಸ್ ಸರಣಿ ನೋಡಿಕೊಂಡೇ ತವರಿಗೆ ಮರಳುವುದಾಗಿ ನಿರ್ಧರಿಸಿದ್ದರಂತೆ. ಹೀಗಾಗಿ ಲಂಕಾದಲ್ಲೇ ವೆಬ್ ಡಿಸೈನರ್ ಆಗಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದ ಅವರು, ಇನ್ನೂ ಕೆಲ ದಿನಗಳ ಕಾಲ ನೈಟ್ ಕ್ಲಬ್‌ನಲ್ಲಿ ಡಿಜೆ ಆಗಿ ಕೆಲಸ ಮಾಡಿ ಜೀವನ ನಡೆಸಿದೆ ಎಂದು ಹೇಳಿಕೊಂಡಿದ್ದಾರೆ.
ಟೆಸ್ಟ್: ಲಂಕಾ ವಿರುದ್ಧ ಇಂಗ್ಲೆಂಡ್ ಮೇಲುಗೈ
ಗಾಲೆ: ಸ್ಪಿನ್ನರ್ ಡಾಮ್ ಬೆಸ್ (5-30)ರ ಸ್ಪಿನ್ ದಾಳಿಗೆ ತತ್ತರಿಸಿದ ಶ್ರೀಲಂಕಾ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 135 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದ್ದು, ಕೇವಲ 8 ರನ್‌ಗಳ ಹಿನ್ನಡೆಯಲ್ಲಿದೆ. ನಾಯಕ ಜೋ ರೂಟ್ 66, ಜಾನಿ ಬೇರ್‌ಸ್ಟೋವ್ 47 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 2 ಪಂದ್ಯಗಳ ಟೆಸ್ಟ್ ಸರಣಿ ಇದಾಗಿದೆ.
ಸ್ಕೋರ್: ಶ್ರೀಲಂಕಾ 135, ಇಂಗ್ಲೆಂಡ್ 127/2