ಬ್ರಿಸ್ಬೇನ್ ಟೆಸ್ಟ್: ಟೀಂ ಇಂಡಿಯಾದಿಂದ ಉತ್ತಮ ಆರಂಭ
ಆಸ್ಟ್ರೇಲಿಯಾ ವಿರುದ್ದದ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬ್ರಿಸ್ಬೇನ್(ಜ.15): ಟೀಂ ಇಂಡಿಯಾ ಯುವ ವೇಗಿಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ಎದುರು ಭಾರತ ಉತ್ತಮ ಆರಂಭ ಪಡೆದಿದೆ. ಬ್ರಿಸ್ಬೇನ್ ಟೆಸ್ಟ್‌ನ ಲಂಚ್ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು ಕೇವಲ 65 ರನ್ ಕಲೆ ಹಾಕಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಅನನುಭವಿ ಬೌಲಿಂಗ್ ಪಡೆಯೆದುರು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಪೇನ್ ಈ ನಿರ್ಧಾರ ತೆಗೆದುಕೊಂಡರು. ಆದರೆ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯದ ಮೊದಲ ಓವರ್‌ನಲ್ಲೇ ಡೇವಿಡ್ ವಾರ್ನರ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್‌ಗೆ ವಾರ್ನರ್ ಪೆವಿಲಿಯನ್ ಹಾದಿ ಹಿಡಿದರು. ಇದಾದ ಕೆಲವೇ ಹೊತ್ತಿನಲ್ಲೇ ಶಾರ್ದೂಲ್ ಠಾಕೂರ್ ತಮ್ಮ ಕೂಟದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಕಸ್ ಹ್ಯಾರಿಸ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಆಸ್ಟ್ರೇಲಿಯಾ ಎದುರು ಗಾಯಕ್ಕೆ ತುತ್ತಾದವರು ಟೀಂ ಇಂಡಿಯಾದ ಒಬ್ಬಿಬ್ಬರಲ್ಲ, ಬರೋಬ್ಬರಿ ಅರ್ಧ ಡಜನ್..!
ಊಟದ ವಿರಾಮದ ವೇಳೆಗೆ ಆಸ್ಟ್ರೇಲಿಯಾ 27 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 65 ರನ್ ಬಾರಿಸಿದ್ದು, ಸ್ಟೀವ್ ಸ್ಮಿತ್ 30 ಹಾಗೂ ಮಾರ್ನಸ್ ಲಬುಶೇನ್ 19 ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸುಂದರ್-ನಟರಾಜನ್: ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಹಾಗೂ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಬುಮ್ರಾ ಬದಲಿಗೆ ನಟರಾಜನ್ ಹಾಗೂ ಜಡೇಜಾ ಬದಲಿಗೆ ಸುಂದರ್ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟೀಂ ಇಂಡಿಯಾದಲ್ಲಿ 4 ಬದಲಾವಣೆ: ಟೀಂ ಇಂಡಿಯಾದಲ್ಲಿ ಕೊನೆಯ ಟೆಸ್ಟ್ ಪಂದ್ಯಕ್ಕೆ 4 ಬದಲಾವಣೆಗಳನ್ನು ಮಾಡಲಾಗಿದೆ. ವಿಹಾರಿ, ಜಡೇಜಾ, ಬುಮ್ರಾ ಹಾಗೂ ಅಶ್ವಿನ್ ಬದಲಿಗೆ ಮಯಾಂಕ್ ಅಗರ್‌ವಾಲ್, ನಟರಾಜನ್, ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಕಲ್ಪಿಸಲಾಗಿದೆ.