* ಪಾಕಿಸ್ತಾನ ಪ್ರವಾಸ ಮಾಡಲು ತೀರ್ಮಾನಿಸಿದ ಇಂಗ್ಲೆಂಡ್ ತಂಡ* 17 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ತೀರ್ಮಾನಿಸಿದ ಇಂಗ್ಲೆಂಡ್* ಏಳು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 02ರವರೆಗೆ ನಡೆಯಲಿರುವ ಸರಣಿ

ಇಸ್ಲಮಾಬಾದ್‌(ಆ.02): ಇಂಗ್ಲೆಂಡ್ ಕ್ರಿಕೆಟ್‌ ತಂಡವು 7 ಪಂದ್ಯಗಳ ಟಿ20 ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಂಗಳವಾರವಾದ ಇಂದು ಖಚಿತಪಡಿಸಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಏಳು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 02ರವರೆಗೆ ಕರಾಚಿ ಹಾಗೂ ಲಾಹೋರ್‌ನಲ್ಲಿ ನಡೆಯಲಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ಇಂಗ್ಲೆಂಡ್ ತಂಡವು ಪಾಕಿಸ್ತಾನಕ್ಕೆ ಬಂದಿಳಿಯಲಿದೆ.

ಸೆಪ್ಟೆಂಬರ್ 20, 22, 23 ಹಾಗೂ 25ರಂದು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲ 4 ಟಿ20 ಪಂದ್ಯಗಳು ನಡೆದರೇ, ಲಾಹೋರ್‌ನ ಗಢಾಫಿ ಸ್ಟೇಡಿಯಂನಲ್ಲಿ ಇನ್ನುಳಿದ ಮೂರು ಪಂದ್ಯಗಳು(ಸೆಪ್ಟೆಂಬರ್ 28, 30 ಹಾಗೂ ಅಕ್ಟೋಬರ್ 02) ನಡೆಯಲಿವೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಇಂಗ್ಲೆಂಡ್ ತಂಡವು ಆಡಲಿರುವ ಕೊನೆಯ ಟಿ20 ಸರಣಿ ಇದಾಗುವ ಸಾಧ್ಯತೆಯಿದೆ. ಇದಾದ ಬಳಿಕ ಇಂಗ್ಲೆಂಡ್ ತಂಡವು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಟಿ20 ವಿಶ್ವಕಪ್ ಮುಗಿಸಿಕೊಂಡು ಮತ್ತೆ ಪಾಕಿಸ್ತಾನಕ್ಕೆ ವಾಪಸ್ಸಾಗಲಿರುವ ಇಂಗ್ಲೆಂಡ್ ತಂಡವು, ಡಿಸೆಂಬರ್‌ನಲ್ಲಿ ಪಾಕಿಸ್ತಾನ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಇಂಗ್ಲೆಂಡ್ ತಂಡವು ಕರಾಚಿ ಹಾಗೂ ಲಾಹೋರ್‌ನಲ್ಲಿ 7 ಪಂದ್ಯಗಳ ಟಿ20 ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಪಾಲ್ಗೊಳ್ಳುವ ವಿಚಾರವನ್ನು ಖಚಿತಪಡಿಸಿದೆ. ಇದು ತುಂಬಾ ಖುಷಿಯ ವಿಚಾರವಾಗಿದೆ. ತವರಿನಲ್ಲಿ ನಾವು ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಉತ್ಸುಕರಾಗಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಝಾಕಿರ್ ಖಾನ್ ತಿಳಿಸಿದ್ದಾರೆ.

Ind vs WI: ಭುವಿ ಬದಲು ನಾಯಕ ರೋಹಿತ್ ಶರ್ಮಾ ಆವೇಶ್‌ ಖಾನ್‌ಗೆ ಕೊನೆಯ ಓವರ್‌ ನೀಡಿದ್ದೇಕೆ..?

ಇಂಗ್ಲೆಂಡ್ ಕ್ರಿಕೆಟ್ ತಂಡವು ಅಗ್ರಶ್ರೇಯಾಂಕಿತ ಟಿ20 ಕ್ರಿಕೆಟ್‌ ತಂಡಗಳಲ್ಲಿ ಒಂದು ಎನಿಸಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನದಲ್ಲಿ ಟಿ20 ಸರಣಿಯನ್ನಾಡುತ್ತಿರುವುದು ಸಾಕಷ್ಟು ಉಪಯೋಗವಾಗಲಿದೆ. ಇದಷ್ಟೇ ಅಲ್ಲದೇ ಇದಾದ ಬಳಿಕ ಡಿಸೆಂಬರ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ನಮ್ಮ ತಂಡವನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಝಾಕಿರ್ ಖಾನ್ ಹೇಳಿದ್ದಾರೆ. 

2021ರ ಅಕ್ಟೋಬರ್ ತಿಂಗಳಿನಲ್ಲಿ, ಇಂಗ್ಲೆಂಡ್ ಪುರುಷ ಹಾಗೂ ಮಹಿಳಾ ಕ್ರಿಕೆಟ್‌ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಆಟಗಾರರ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ ಕಟ್ಟುನಿಟ್ಟಾದ ಬಯೋಬಬಲ್‌ ವ್ಯವಸ್ಥೆಯಲ್ಲಿರುವ ಇಂಗ್ಲೆಂಡ್‌ ಆಟಗಾರರು ಹಿಂದೇಟು ಹಾಕಿದ್ದರಿಂದ ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ತಂಡವು ಪಾಕ್ ಪ್ರವಾಸದಿಂದ ಹಿಂದೆ ಸರಿದಿತ್ತು. ಇದು ಭದ್ರತೆಯ ನೆಪವೊಡ್ಡಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಸರಣಿಯನ್ನಾಡಲು ಹಿಂದೆ ಸರಿದ ಮೂರು ದಿನಗಳ ಬಳಿಕ ಇಂಗ್ಲೆಂಡ್ ಈ ನಿರ್ಧಾರವನ್ನು ಪ್ರಕಟಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.