Asianet Suvarna News Asianet Suvarna News

Ind vs WI: ಭುವಿ ಬದಲು ನಾಯಕ ರೋಹಿತ್ ಶರ್ಮಾ ಆವೇಶ್‌ ಖಾನ್‌ಗೆ ಕೊನೆಯ ಓವರ್‌ ನೀಡಿದ್ದೇಕೆ..?

* ವೆಸ್ಟ್ ಇಂಡೀಸ್ ಎದುರು ಎರಡನೇ ಪಂದ್ಯದಲ್ಲಿ ರೋಚಕ ಸೋಲು ಕಂಡ ಟೀಂ ಇಂಡಿಯಾ
* ಕೊನೆಯ ಓವರ್‌ನಲ್ಲಿ ದುಬಾರಿಯಾದ ಯುವ ವೇಗಿ ಆವೇಶ್ ಖಾನ್
* ಆವೇಶ್‌ ಖಾನ್‌ಗೆ ಕೊನೆಯ ಓವರ್ ನೀಡಿದ್ದೇಕೆಂದು ವಿವರಿಸಿದ ನಾಯಕ ರೋಹಿತ್ ಶರ್ಮಾ

Captain Rohit Sharma Explains Why he was Avesh Khan given the final over instead of Bhuvneshwar Kumar kvn
Author
Bengaluru, First Published Aug 2, 2022, 1:53 PM IST

ಬಾಸೆಟೆರೆ(ಆ.02): ವೆಸ್ಟ್ ಇಂಡೀಸ್ ನೆಲದಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಎರಡನೇ ಟಿ20 ಪಂದ್ಯದಲ್ಲಿ ಬ್ರೇಕ್‌ ಬಿದ್ದಿದೆ. ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಬೀಗಿದ್ದ ಟೀಂ ಇಂಡಿಯಾ, 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಸೋಲು ಕಂಡು ನಿರಾಸೆ ಅನುಭವಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಟೀಂ ಇಂಡಿಯಾ, ಒಬೆಡ್ ಮೆಕಾಯ್ ಮಾರಕ ದಾಳಿಗೆ ತತ್ತರಿಸಿ ಕೇವಲ 138 ರನ್‌ಗಳಿಗೆ ಸರ್ವಪತನ ಕಂಡಿತ್ತು. ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್‌ಗಳ ಜಯ ದಾಖಲಿಸಿತ್ತು.

ಭಾರತ ನೀಡಿದ್ದ ಸಾಧಾರಣ ಗುರಿ ಕೂಡಾ ಒಂದು ಹಂತದಲ್ಲಿ ವೆಸ್ಟ್ ಇಂಡೀಸ್‌ ಪಾಳಯದಲ್ಲಿ ತಳಮಳವನ್ನು ಸೃಷ್ಟಿಸಿತ್ತು. ಕೊನೆಯ ಎರಡು ಓವರ್‌ಗಳಲ್ಲಿ ವಿಂಡೀಸ್‌ಗೆ ಗೆಲ್ಲಲು 16 ರನ್‌ಗಳ ಅಗತ್ಯವಿತ್ತು. ಈ ವೇಳೆ 19ನೇ ಓವರ್‌ ಬೌಲಿಂಗ್ ಮಾಡಲು ನಾಯಕ ರೋಹಿತ್ ಶರ್ಮಾ ಚೆಂಡನ್ನು ಯುವ ವೇಗಿ ಆರ್ಶದೀಪ್ ಸಿಂಗ್‌ಗೆ ನೀಡಿದರು. ನಾಯಕನ ನಂಬಿಕೆ ಉಳಿಸಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ನೀಡಿದ ಆರ್ಶದೀಪ್ ಸಿಂಗ್ ಕೇವಲ 6 ರನ್ ನೀಡಿ ರೋಮನ್ ಪೊವೆಲ್ ಅವರ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಕೊನೆಯ ಓವರ್‌ ಬೌಲಿಂಗ್ ಭುವನೇಶ್ವರ್ ಕುಮಾರ್ ಮಾಡಲಿದ್ದಾರೆ ಎಂದು ಬಹುತೇಕ ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಯಾಕೆಂದರೆ ಭುವಿ ಕೇವಲ 2 ಓವರ್‌ ಬೌಲಿಂಗ್ ಮಾಡಿ 12 ರನ್‌ಗಳನ್ನಷ್ಟೇ ನೀಡಿದ್ದರು. ಆದರೆ ರೋಹಿತ್ ಶರ್ಮಾ ಅಚ್ಚರಿ ಎನ್ನುವಂತೆ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಅನನುಭವಿ ವೇಗಿ ಆವೇಶ್‌ ಖಾನ್‌ಗೆ ನೀಡಿದರು.  

ಈ ನಿರ್ಧಾರಕ್ಕೆ ಟೀಂ ಇಂಡಿಯಾ ಬೆಲೆ ತೆರುವಂತಾಯಿತು. ಯಾಕೆಂದರೆ ಆವೇಶ್ ಖಾನ್ ಮೊದಲೆರಡು ಎಸೆತಗಳಲ್ಲಿ 12 ರನ್ ನೀಡಿದರು. ಭುವನೇಶ್ವರ್ ಕುಮಾರ್ ಅವರ ಆಯ್ಕೆ ಇದ್ದಾಗಿಯೂ ಕೊನೆಯ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಆವೇಶ್ ಖಾನ್ ಅವರಿಗೆ ನೀಡಿದ್ದೇಕೆ ಎಂದು ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೊಗಸಾಗಿ ಉತ್ತರಿಸಿದ್ದಾರೆ. 

Ind vs WI ಮೂರನೇ ಟಿ20 ಪಂದ್ಯದಲ್ಲಾದರೂ ದೀಪಕ್‌ ಹೂಡಾಗೆ ಸಿಗುತ್ತಾ ಸ್ಥಾನ..?

ಪ್ರಾಮಾಣಿಕವಾಗಿ ಹೇಳಬೇಕೆಂದರೇ, ನಾವು ಮೊದಲು ಸಾಕಷ್ಟು ರನ್ ಗಳಿಸಲು ವಿಫಲರಾಗಿದ್ದೆವು. ನಾವು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ. ಪಿಚ್‌ ಆಡುವುದಕ್ಕೆ ಚೆನ್ನಾಗಿಯೇ ಇತ್ತು. ಆದರೆ ಪಿಚ್‌ಗೆ ಅನುಗುಣವಾಗಿ ಆಡಲು ನಾವು ವಿಫಲರಾದೆವು. ಆಟದಲ್ಲಿ ಹೀಗೆಲ್ಲ ಆಗುತ್ತದೆ. ನಾವು ಇದರಿಂದ ಪಾಠ ಕಲಿಯುತ್ತೇವೆ. ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ ಕೊನೆಯ ಓವರ್ ಆವೇಶ್‌ ಖಾನ್‌ಗೆ ನೀಡಲಾಯಿತು. ನಮ್ಮ ತಂಡಕ್ಕೆ ಭುವನೇಶ್ವರ್ ಕುಮಾರ್ ಅವರ ಕಾಣಿಕೆ ಏನೆಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಕಳೆದ ಹಲವಾರು ವರ್ಷಗಳಿಂದ ಅವರು ತಾವೇನು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನೀವು ಆವೇಶ್ ಖಾನ್ ಮತ್ತು ಆರ್ಶದೀಪ್ ಸಿಂಗ್ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡದೇ ಹೋದರೆ ಅವರ ಸಾಮರ್ಥ್ಯವೇನು ಎನ್ನುವುದನ್ನು ಅರಿಯಲು ಸಾಧ್ಯವಿಲ್ಲ. ಇದು ಕೇವಲ ಒಂದು ಪಂದ್ಯವಷ್ಟೇ. ಇವರೆಲ್ಲರೂ ಪ್ರತಿಭಾನ್ವಿತ ಆಟಗಾರರಾಗಿದ್ದು, ಒಳ್ಳೆಯ ಕೌಶಲ್ಯವಿದೆ. ನಾವು ಅವರನ್ನು ಬೆಂಬಲಿಸಬೇಕಷ್ಟೇ. ನನಗೆ ನನ್ನ ತಂಡದ ಬೌಲರ್‌ಗಳ ಬಗ್ಗೆ ಹಾಗೂ ತಂಡದ ಬಗ್ಗೆ ಹೆಮ್ಮೆಯಿದೆ. ನಾವು ನೀಡಿದ್ದ ಗುರಿಯನ್ನು 13-14 ಓವರ್‌ಗಳಲ್ಲಿ ಪಂದ್ಯ ಮುಗಿಯಬಹುದಿತ್ತು. ಆದರೆ ನಾವು ಕೊನೆಯ ಓವರ್‌ವರೆಗೂ ಪಂದ್ಯವನ್ನು ಕೊಂಡೊಯ್ಯದೆವು. ಆದರೆ ನಮ್ಮ ಬೌಲರ್‌ಗಳು ತಾವು ಅಂದುಕೊಂಡಂತೆ ಬೌಲಿಂಗ್ ಮಾಡುವ ಮೂಲಕ ಸಾಕಷ್ಟು ಪೈಪೋಟಿ ನೀಡಿದರು. ನಮ್ಮ ತಂಡದ ಬೌಲರ್‌ಗಳ ಪ್ರದರ್ಶನದ ಕುರಿತಂತೆ ಹೆಮ್ಮೆಯಿದೆ. ನಾವು ನಮ್ಮ ತಂಡದ ಬ್ಯಾಟಿಂಗ್ ಕುರಿತಂತೆ ಗಮನ ಹರಿಸಬೇಕಿದೆ. ಆದರೆ ಒಂದಂತೂ ಹೇಳುತ್ತೇನೆ. ಬ್ಯಾಟಿಂಗ್ ತಂತ್ರಗಾರಿಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ನಾವು ಹೆದರುವುದಿಲ್ಲ. ಒಂದು ಸೋಲಿನಿಂದ ನಮ್ಮ ತಂತ್ರಗಾರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ.

Follow Us:
Download App:
  • android
  • ios