* ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿ ಬೀಗಿದ ಇಂಗ್ಲೆಂಡ್* 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿದ ಬೆನ್ ಸ್ಟೋಕ್ಸ್ ಪಡೆ* ಕಿವೀಸ್‌ ಮಣಿಸಿ, ಭಾರತದ ಎದುರಿನ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟ ಇಂಗ್ಲೆಂಡ್

ಲೀಡ್ಸ್(ಜೂ.28): ನ್ಯೂಜಿಲೆಂಡ್‌ ವಿರುದ್ಧದ 3ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ 7 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಸರಣಿಯುದ್ದಕ್ಕೂ ಪ್ರವಾಸಿ ನ್ಯೂಜಿಲೆಂಡ್ ಎದುರು ಪ್ರಾಬಲ್ಯ ಮೆರೆದ ಬೆನ್ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿ ಕ್ಲೀನ್‌ಸ್ವೀಪ್ ಮಾಡಿದೆ

ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 296 ರನ್‌ ಗುರಿ ಪಡೆದಿದ್ದ ಇಂಗ್ಲೆಂಡ್‌ 5ನೇ ದಿನದ ಮೊದಲ ಸೆಷನ್ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ನಾಲ್ಕನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದ್ದ ಇಂಗ್ಲೆಂಡ್ ತಂಡವು ಕೊನೆಯ ದಿನದಾಟದಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಓಲಿ ಪೋಪ್ 82, ಜೋ ರೂಟ್‌ 86, ಜಾನಿ ಬೇರ್‌ಸ್ಟೋವ್‌ 71(44 ಎಸೆತ) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 

ಇದಕ್ಕೂ ಮೊದಲು ಮೊದಲ ಇನ್ನಿಂಗ್‌್ಸನಲ್ಲಿ ನ್ಯೂಜಿಲೆಂಡನ್ನು 329ಕ್ಕೆ ನಿಯಂತ್ರಿಸಿದ್ದ ಇಂಗ್ಲೆಂಡ್‌ ತಂಡವು ಒಂದು ಹಂತದಲ್ಲಿ ಕೇವಲ 55 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಜಾನಿ ಬೇರ್‌ಸ್ಟೋವ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಬೇರ್‌ಸ್ಟೋವ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಜಾನಿ ಬೇರ್‌ಸ್ಟೋವ್ 162 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡವು 360 ರನ್ ಕಲೆಹಾಕಲು ನೆರವಾದರು. ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಪಡೆದ ಇಂಗ್ಲೆಂಡ್ ತಂಡವು, ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 326 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. 

Ind vs Eng ರೋಹಿತ್‌ ಶರ್ಮಾಗೆ ಕೋವಿಡ್ ದೃಢ, ಇಂಗ್ಲೆಂಡ್‌ನತ್ತ ಮುಖಮಾಡಿದ ಮಯಾಂಕ್ ಅಗರ್‌ವಾಲ್..!

ಮೊದಲ ಅಗ್ನಿ ಪರೀಕ್ಷೆ ಪಾಸಾದ ಬೆನ್ ಸ್ಟೋಕ್ಸ್‌: ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡವು ಹೀನಾಯ ಪ್ರದರ್ಶನ ತೋರುವ ಮೂಲಕ ನೆಲಕಚ್ಚಿತ್ತು. ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಜೂ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು 11 ಸೋಲು ಹಾಗೂ ಏಕೈಕ ಗೆಲುವು ಸಾಧಿಸಿತ್ತು. ನ್ಯೂಜಿಲೆಂಡ್ ಎದುರಿನ ಟೆಸ್ಟ್‌ ಸರಣಿಗೂ ಮುನ್ನ ಜೋ ರೂಟ್, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ಆಲ್ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಹೊಸ ಟೆಸ್ಟ್ ಹೆಡ್ ಕೋಚ್ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನ ಹಾಗೂ ಬೆನ್ ಸ್ಟೋಕ್ಸ್‌ ನಾಯಕತ್ವದಲ್ಲಿ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಎದುರು 3-0 ಅಂತರದಲ್ಲಿ ಟೆಸ್ಟ್ ಸರಣಿ ಕ್ಲೀನ್‌ ಸ್ವೀಪ್ ಮಾಡುವಲ್ಲಿ ಇಂಗ್ಲೆಂಡ್ ತಂಡವು ಯಶಸ್ವಿಯಾಗಿದೆ.

Scroll to load tweet…

ಇದಕ್ಕೂ ಮೊದಲು ಲಾರ್ಡ್ಸ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಕಿವೀಸ್ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಇನ್ನು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 299 ರನ್‌ಗಳ ಕಠಿಣ ಗುರಿ ಬೆನ್ನತ್ತಿ ಬೆನ್ ಸ್ಟೋಕ್ಸ್‌ ಪಡೆ 5 ವಿಕೆಟ್‌ಗಳ ಜಯ ದಾಖಲಿಸಿತ್ತು.

ವನಿತಾ ಟಿ20: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸೋಲು

ಡಂಬುಲಾ: ಶ್ರೀಲಂಕಾ ವಿರುದ್ಧದ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ ಸೋಲನುಭವಿಸಿದೆ. ಆದರೆ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ತಂಡ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ಗೆ 138 ರನ್‌ ಕಲೆ ಹಾಕಿತು. ಹರ್ಮನ್‌ಪ್ರೀತ್‌ ಕೌರ್‌ 39, ಜೆಮಿಮಾ ರೋಡ್ರಿಗಸ್‌ 33 ರನ್‌ ಸಿಡಿಸಿದರು. 

ಸಾಧಾರಣ ಗುರಿ ಬೆನ್ನತ್ತಿದ ಲಂಕಾ 17 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ನಾಯಕಿ ಚಾಮರಿ ಅಟಪಟ್ಟು ಕೇವಲ 48 ಎಸೆತಗಳಲ್ಲಿ 80 ರನ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಹರ್ಮನ್‌ಪ್ರೀತ್‌ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.