ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನ ಭಾರತಕ್ಕೆ ಗೆಲುವಿಗೆ 135 ರನ್‌ಗಳ ಅಗತ್ಯವಿದ್ದು, ಇಂಗ್ಲೆಂಡ್‌ಗೆ ಆರು ವಿಕೆಟ್‌ಗಳ ಅಗತ್ಯವಿದೆ. ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಟೀಂ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಲಾರ್ಡ್ಸ್ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಲ್ಲ ಎಂಬುದು ಸಾಬೀತಾಗಿದೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯವು ಇದೀಗ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಇದೀಗ ಕೊನೆಯ ದಿನದಾಟದಲ್ಲಿ ಐತಿಹಾಸಿಕ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಕೇವಲ 135 ರನ್‌ಗಳ ಅಗತ್ಯವಿದೆ. ಇನ್ನು ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಮೂರನೇ ಟೆಸ್ಟ್ ಗೆಲ್ಲಲು ಆರು ವಿಕೆಟ್‌ಗಳ ಅಗತ್ಯವಿದೆ. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ರೋಚಕ ಕಾದಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ನಾಲ್ಕನೇ ದಿನದಾಟದ ಅಂತ್ಯದ ಬಳಿಕ ಉಭಯ ತಂಡಗಳು ಗೆಲುವಿನ ಕನಸು ಕಾಣಲಾರಂಭಿಸಿವೆ. ಹೀಗಿರುವಾಗಲೇ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಮಾರ್ಕಸ್ ಥ್ರೆಸ್ಕೋಥಿಕ್, ಐದನೇ ದಿನದಾಟ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ತನ್ನ ಪಾಲಿನ ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಮಾರಕ ದಾಳಿಗೆ ತತ್ತರಿಸಿ ಕೇವಲ 192 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ 193 ರನ್‌ಗಳ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ. ಈ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ, ನಾಲ್ಕನೇ ದಿನದಾಟ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 58 ರನ್ ಬಾರಿಸಿದೆ. ಹೀಗಾಗಿ ಎಲ್ಲರ ಚಿತ್ತ ಐದನೇ ದಿನದಾಟದ ಮೇಲೆ ನೆಟ್ಟಿದೆ. 

ಹೀಗಿರುವಾಗಲೇ ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಮಾರ್ಕಸ್ ಥ್ರಿಸ್ಕೋಥಿಕ್, ಟೀಂ ಇಂಡಿಯಾಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. 'ನಾಲ್ಕನೇ ದಿನದಾಟದ ಕೊನೆಯ ಒಂದು ಗಂಟೆ ಪಿಚ್ ವರ್ತಿಸಿದ ರೀತಿಯನ್ನು ಗಮನಿಸಿದಾಗ, ಇಡೀ ತಂಡವು ಸಂಘಟಿತ ಪ್ರದರ್ಶನ ತೋರುವಲ್ಲಿ ಸಫಲವಾಗಿದೆ. ಪ್ರೇಕ್ಷಕರು ಕೂಡಾ ತವರಿನ ತಂಡವನ್ನು ಬೆಂಬಲಿಸಿದ್ದಾರೆ. ಇದು ಮೈದಾನದಲ್ಲಿದ್ದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ. ಈ ಟೆಸ್ಟ್‌ ಕೊನೆಯ ದಿನದ ಮೊದಲ ಒಂದು ಗಂಟೆಯಲ್ಲಿಯೇ ಪಂದ್ಯ ನಮ್ಮ ಕೈವಶವಾಗಲಿದೆ. ನಮ್ಮ ಬೌಲಿಂಗ್ ದಾಳಿಯನ್ನು ಭಾರತ ಎಷ್ಟು ಸಕಾರಾತ್ಮಕವಾಗಿ ಎದುರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ನಮ್ಮ ಬೌಲರ್‌ಗಳು ಮೊದಲ ಒಂದು ಗಂಟೆಯಲ್ಲೇ ಭಾರತದ ಇನ್ನುಳಿದ ಆರು ವಿಕೆಟ್ ಕಬಳಿಸುವ ವಿಶ್ವಾಸವಿದೆ ಎಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಎಚ್ಚರಿಕೆ ನೀಡಿದ್ದಾರೆ.

ಲಾರ್ಡ್ಸ್‌ನಲ್ಲಿ ಬ್ಯಾಟಿಂಗ್ ಮಾಡೋದು ಸುಲಭವಲ್ಲ:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತಗಳು ದಾಖಲಾಗಿದ್ದವು. ಆದರೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಉಭಯ ತಂಡಗಳ ಬಹುತೇಕ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿರುವುದು ಈ ಪಿಚ್‌ನಲ್ಲಿ ಬ್ಯಾಟ್ ಮಾಡುವುದು ಸುಲಭವಲ್ಲ ಎನ್ನುವ ಸಂದೇಶ ಸಿಕ್ಕಿದೆ. ಮೂರನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 387 ರನ್‌ಗಳಿಗೆ ಸರ್ವಪತನ ಕಂಡಿತು. 

ಇನ್ನು ಇದಕ್ಕುತ್ತರವಾಗಿ ಭಾರತ ಕೂಡಾ ತನ್ನ ಪಾಲಿನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಮೂರನೇ ದಿನದಾಟದವರೆಗೂ ಉಭಯ ತಂಡಗಳು ಸಮಬಲದ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿವೆ. ಮೊದಲ ನಾಲ್ಕು ದಿನದ ದಿನದಾಟದಲ್ಲಿ ಕೇವಲ ಎರಡು ಶತಕಗಳಷ್ಟೇ ದಾಖಲಾಗಿರುವುದು ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಎಷ್ಟು ಕಷ್ಟ ಎನ್ನುವುದು ಸಾಬೀತಾಗಿದೆ. ಹೀಗಾಗಿ ಕೊನೆಯ ದಿನದಾಟದಲ್ಲಿ ಟೀಂ ಇಂಡಿಯಾ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕೆಂದರೇ ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದೆ.