Ashwin-Jadeja Viral Video: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾ ಕಂಡಿದೆ. ಆ ಮೂಲಕ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದಿದೆ. ಇಡೀ ಸರಣಿಯಲ್ಲಿ ಅಶ್ವಿನ್‌ ಹಾಗೂ ಜಡೇಜಾ ಸ್ಪಿನ್‌ ಮೋಡಿಯ ಮೂಲಕ ಆಸೀಸ್‌ಅನ್ನು ಕಂಗೆಡಿಸಿದ್ದರು.

ಬೆಂಗಳೂರು (ಮಾ.14): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿ ಮುಕ್ತಾಯವಾಗಿದೆ. ಸೋಮವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್‌ ಪಂದ್ಯ ಡ್ರಾ ಕಂಡಿದ್ದರಿಂದ ಭಾರತ 2-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತು. ಸಂಪೂರ್ಣ ಸರಣಿಯಲ್ಲಿ ಭಾರತದ ಅನುಭವಿ ಸ್ಪಿನ್‌ ಜೋಡಿಗಳಾದ ಆರ್‌.ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಪ್ರವಾಸಿ ತಂಡವನ್ನು ಬಹುವಾಗಿ ಕಾಡಿದರು. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ 7 ವಿಕಟ್‌ ಉರುಳಿಸಿ ಮಿಂದಿದ್ದರು. ಒಟ್ಟಾರೆ ಸರಣಿಯಲ್ಲಿ ಅಶ್ವಿನ್‌ 25 ವಿಕೆಟ್‌ಅನ್ನು ಉರುಳಿಸಿದರೆ, ರವೀಂದ್ರ ಜಡೇಜಾ 22 ವಿಕೆಟ್‌ಅನ್ನು ಉರುಳಿಸಿ ಗಮನಸೆಳೆದರು. ಇಡೀ ಸರಣಿಯಲ್ಲಿ ಗರಿಷ್ಠ ವಿಕೆಟ್‌ ಉರುಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್‌ ಹಾಗೂ ಜಡೇಜಾ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಇಬ್ಬರೂ ತಮ್ಮ ನಡುವೆ 47 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸಂಭ್ರಮವನ್ನು ಇಬ್ಬರೂ ಕೂಡ ವಿಶೇಷ ಹಾಸ್ಯದ ವಿಡಿಯೋ ಮೂಲಕ ಇನ್ಸ್‌ಟಾಗ್ರಾಮ್‌ನಲ್ಲಿಯೂ ಹಂಚಿಕೊಂಡಿದ್ದಾರೆ.

View post on Instagram

ಈ ಫನ್ನಿ ವಿಡಿಯೋವನ್ನು ಅಶ್ವಿನ್‌ ತಮ್ಮ ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ನಟನೆಯ 'ದೀವಾನೆ ಹುಯೇ ಪಾಗಲ್‌' ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಇನ್ನೊಬ್ಬ ನಟನ ಜೊತೆಗೆ ನಡೆಯುವ 'ಏಕ್‌ ತೇರಾ ಏಕ್‌ ಮೇರಾ..' ಹಾಸ್ಯದೃಶ್ಯವನ್ನು ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಮರುಸೃಷ್ಟಿ ಮಾಡಿದ್ದಾರೆ.

ಏಕ್‌ ತೇರಾ.. ಏಕ್‌ ಮೇರಾ ಎಂದರೆ ಕನ್ನಡದಲ್ಲಿ ' ಒಂದು ನಿಂದು.. ಒಂದು ನಂದು..' ಅನ್ನೋದಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಇಡೀ ರೀತಿಯಲ್ಲಿ ತಾವು ವಿಕೆಟ್‌ ಉರುಳಿಸಿದ್ದು ಎನ್ನುವ ರೀತಿಯಲ್ಲಿ ಏಕ್‌ ತೇರಾ..ಏಕ್‌ ಮೇರಾ ಹಾಸ್ಯದೃಶ್ಯವನ್ನು ಈ ಜೋಡಿ ಮರುಸೃಷ್ಟಿಸಿದೆ. ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಮೆಚ್ಚಿದ್ದಾರೆ. 

ನಾವು ಬೇರೆ ಪಿಚ್‌ನಲ್ಲಿ ಆಡ್ತೀವಾ ಎಂದು ಆಸ್ಟ್ರೇಲಿಯಾ ಕಾಲೆಳೆದ ರವಿಚಂದ್ರನ್‌ ಅಶ್ವಿನ್‌

ಇನ್ನೊಂದೆಡೆ ಎಸ್‌ಎಸ್‌ ರಾಜಮೌಳಿ ಅವರ ಚಿತ್ರ ಆರ್‌ಆರ್‌ಆರ್‌ ಆಸ್ಕರ್‌ಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದು, ಚಿತ್ರದ ನಾಟು ನಾಟು ಗೀತೆಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಜಯಿಸಿದೆ. ಅಶ್ವಿನ್‌ ಹಾಗೂ ಜಡೇಜಾ ಮರುಸೃಷ್ಟಿ ಮಾಡಿರುವ ಈ ಹಾಸ್ಯದೃಶ್ಯದ ಕೊನೆಗೆ ನಾಟು ನಾಟು ಗೀತೆಗೆ ಡಾನ್ಸ್‌ ಮಾಡಿಯೂ ಗಮನಸೆಳೆದ್ದಾರೆ. ಅಭಿಮಾನಿಗಳು ಈ ವಿಡಿಯೋವನ್ನು ಅಪಾರವಾಗಿ ಮೆಚ್ಚಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಕೆಎಲ್‌ ರಾಹುಲ್‌ ವಿರುದ್ಧ ವೆಂಕಿ ಗರಂ, 'ಬೇರೆ ಯಾರಿಗಾದ್ರೂ ಚಾನ್ಸ್‌ ನೀಡಿ..' ಎಂದ ಮಾಜಿ ವೇಗಿ

ಬಾರ್ಡರ್‌ ಗಾವಸ್ಕರ್‌ ಟೆಸ್ಟ್‌ ಸರಣಿಯನ್ನು 2-1 ರಿಂದ ಗೆಲ್ಲುವ ಮೂಲಕ ಭಾರತ ತಂಡ ಪ್ರತಿಷ್ಠಿತ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಅದಲ್ಲದೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ಗೂ ಅರ್ಹತೆ ಪಡೆದುಕೊಂಡಿದೆ. ಜೂನ್‌ 7 ರಿಂದ ಇಂಗ್ಲೆಂಡ್‌ನ ಓವಲ್‌ ಮೈದಾನದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಕಾದಾಟ ನಡೆಸಲಿದೆ. ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಸತತ 2ನೇ ವರ್ಷ ಅರ್ಹತೆ ಪಡೆದುಕೊಂಡಿದೆ. ಮೊದಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೋಲು ಕಂಡಿತ್ತು.