ಲಂಡನ್(ಆ.19): ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ 14 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಇಂಗ್ಲೆಂಡ್ ಪ್ರಕಟಿಸಿದೆ. ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. 

ಪಾಕ್‌ ವಿರುದ್ಧ ಸೌಂಥಾಪ್ಟನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಮುಗಿದು 3 ದಿನಗಳ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಟಿ20 ಟೂರ್ನಿ ನಡೆಯಲಿದ್ದು, ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ನಾವು ಬಹುಮಾದರಿಯ ಆಟಗಾರರ ಪೈಕಿ ಕೆಲವರಿಗೆ ವಿಶ್ರಾಂತಿ ನೀಡಿದ್ದೇವೆ, ಮತ್ತೆ ಕೆಲವರಿಗೆ ಅವಕಾಶ ಒದಗಿಸುವ ಮೂಲಕ ಪ್ರತಿ ಸರಣಿಗೂ ಬಲಿಷ್ಠ ತಂಡವನ್ನೇ ಆಯ್ಕೆ ಮಾಡುತ್ತೇವೆ. ಅದೇ ರೀತಿ ಪಾಕಿಸ್ತಾನ ವಿರುದ್ಧದ ಸರಣಿಗೂ ಇದೇ ವಿಧಾನವನ್ನು ಬಳಸಿದ್ದೇವೆ ಎಂದು ಇಂಗ್ಲೆಂಡ್ ಆಯ್ಕೆ ಸಮಿತಿ ಮುಖ್ಯಸ್ಥ ಎಡ್ ಸ್ಮಿತ್ ಹೇಳಿದ್ದಾರೆ.

ಇಂಗ್ಲೆಂಡ್-ಪಾಕಿಸ್ತಾನ 2ನೇ ಟೆಸ್ಟ್‌ ನೀರಸ ಡ್ರಾನಲ್ಲಿ ಅಂತ್ಯ

ಇದೇ ವೇಳೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ಸಹಾಯಕ ಕೋಚ್ ಆಗಿದ್ದ ಗ್ರಾಹಂ ಥ್ರೋಪ್ ಅವರು ಟಿ20 ಸರಣಿಯಲ್ಲಿ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಖಚಿತಪಡಿಸಿದೆ.

ಟಿ20 ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಇಯಾನ್ ಮಾರ್ಗನ್(ನಾಯಕ), ಮೊಯೀನ್ ಅಲಿ, ಜಾನಿ ಬೇರ್‌ಸ್ಟೋವ್(ವಿಕೆಟ್‌ ಕೀಪರ್), ಟಾಮ್ ಬಾಂಟನ್, ಸ್ಯಾಮ್ ಬಿಲ್ಲಿಂಗ್ಸ್, ಜೋ ಡೆನ್ಲಿ, ಲೆವಿಸ್ ಗ್ರೆಗೊರಿ, ಕ್ರಿಸ್ ಜೋರ್ಡನ್, ಶಕೀಬ್ ಮಸೂದ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ.

ಕಾಯ್ದಿರಿಸಿದ ಆಟಗಾರರು: ಪ್ಯಾಟ್ ಬ್ರೌನ್, ಲಿಯಾಮ್ ಲಿವಿಂಗ್‌ಸ್ಟೋನ್, ರೀಸಿ ಟೋಪ್ಲೆ