ಸೌಥಾಂಪ್ಟನ್(ಆ.18)‌: ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಣ 2ನೇ ಟೆಸ್ಟ್‌ಗೆ ಮಳೆ ಕಾಡಿದ ಪರಿಣಾಮ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿದೆ. ಇದರ ಹೊರತಾಗಿಯೂ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

5ನೇ ಹಾಗೂ ಕೊನೆಯ ದಿನವಾದ ಸೋಮವಾರ ಕೂಡ ಮಳೆ ಆರ್ಭಟ ಮುಂದುವರೆಯಿತು. 5 ದಿನಗಳಲ್ಲೂ ಮಳೆ ಹಾಗೂ ಮಂದಬೆಳಕು ಪಂದ್ಯಕ್ಕೆ ಅಡ್ಡಿಯಾಗಿತ್ತು. ಮೊದಲ 2 ದಿನ ಮಾತ್ರ ಮಳೆ ಬಿಡುವು ನೀಡಿದ್ದರಿಂದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್‌ ಮಾಡಿತ್ತು. 236 ರನ್‌ಗಳಿಗೆ ಆಲೌಟ್‌ ಆಗಿತ್ತು. 3ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದಾಗಿತ್ತು. 4ನೇ ದಿನದಾಟದಲ್ಲಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ ಆರಂಭಿಸಿ 1 ವಿಕೆಟ್‌ಗೆ 7 ರನ್‌ ಗಳಿಸಿತ್ತು.
ಇನ್ನು 5ನೇ ದಿನದಾಟದಲ್ಲಿ 43 ಓವರ್‌ಗಳನ್ನು ಎದುರಿಸಿದ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 110 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ಕೊರೋನಾದಿಂದ ರದ್ದಾದ ಪಂದ್ಯದ ಬದಲು ಇಂಗ್ಲೆಂಡ್ ಟೆಸ್ಟ್ ಆಯೋಜಿಸಲು BCCIಗೆ ಪತ್ರ!

ಪಾಕಿಸ್ತಾನ ಪರ 72 ರನ್ ಬಾರಿಸಿದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇನ್ನು ಮೂರನೇ ಟೆಸ್ಟ್ ಪಂದ್ಯವು ಆಗಸ್ಟ್ 21ರಿಂದ ಇದೇ ಸೌಥಾಂಪ್ಟನ್‌ ರೋಸ್ ಬೌಲ್‌ ಮೈದಾನದಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಬೇಕಿದ್ದರೆ ಮೂರನೇ ಪಂದ್ಯವನ್ನು ಪಾಕಿಸ್ತಾನ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಸ್ಕೋರ್‌: 
ಪಾಕಿಸ್ತಾನ 236/10 
ಇಂಗ್ಲೆಂಡ್‌ 110/4 ಡಿಕ್ಲೇರ್