ಎಂಎಸ್‌ ಧೋನಿ ಅವರು ಈಗಲೂ ಬಿಸಿಸಿಐನಿಂದ ಹಣ ಪಡೆಯುತ್ತಿದ್ದಾರೆ. ಅವರಿಗೆ ತಿಂಗಳಿಗೆ ಎಷ್ಟು ಸಾವಿರ ಹಣ ಪಿಂಚಣಿ ರೂಪದಲ್ಲಿ ಬರುತ್ತಿದೆ ಗೊತ್ತಾ? ಕಂಪ್ಲೀಟ್ ಮಾಹಿತಿ ಸ್ಟೋರಿಯಲ್ಲಿದೆ..

ಟೀಮ್ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ವರ್ಷಗಳೇ ಕಳೆದಿವೆ. 2020ರಲ್ಲಿ ನಿವೃತ್ತಿ ಘೋಷಿಸಿದರೂ ಧೋನಿ ಇಂದಿಗೂ ಐಪಿಎಲ್ ಮೂಲಕ ಮೈದಾನದಲ್ಲಿ ಅಬ್ಬರಿಸುತ್ತಿದ್ದಾರೆ. ಜಾಹೀರಾತುಗಳು, ಬಿಸಿನೆಸ್ ಮತ್ತು ಐಪಿಎಲ್ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸುವ ಧೋನಿಗೆ, ಬಿಸಿಸಿಐನಿಂದ ಪ್ರತಿ ತಿಂಗಳು ಪಿಂಚಣಿ (Pension) ಬರುತ್ತದೆಯೇ? ಬರುವುದಾದರೆ ಅದು ಎಷ್ಟು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಧೋನಿಗೆ ಬಿಸಿಸಿಐ ಪಿಂಚಣಿ

ಹೌದು, ಬಿಸಿಸಿಐನ ನಿಯಮದಂತೆ ಮಾಜಿ ಅಂತಾರಾಷ್ಟ್ರೀಯ ಆಟಗಾರರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. 2022ರಲ್ಲಿ ಬಿಸಿಸಿಐ ತನ್ನ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದು ಮಾಜಿ ಆಟಗಾರರಿಗೆ ನೀಡುವ ಮೊತ್ತವನ್ನು ಹೆಚ್ಚಿಸಿತ್ತು. ಎಂಎಸ್ ಧೋನಿ ಭಾರತದ ಪರ 90 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ 25 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಮಾಜಿ ಆಟಗಾರರು ಗರಿಷ್ಠ ಪಿಂಚಣಿಗೆ ಅರ್ಹರಾಗಿರುತ್ತಾರೆ. ಈ ವರ್ಗದ ಆಟಗಾರರಿಗೆ ಪ್ರಸ್ತುತ ಪ್ರತಿ ತಿಂಗಳು 70,000 ರೂಪಾಯಿ ಪಿಂಚಣಿ ನೀಡಲಾಗುತ್ತಿದೆ. ಅದರಂತೆ ಧೋನಿ ಕೂಡ ಪ್ರತಿ ತಿಂಗಳು ಬಿಸಿಸಿಐನಿಂದ 70 ಸಾವಿರ ರೂ. ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.

ಪಿಂಚಣಿ ಲೆಕ್ಕಾಚಾರ ಹೇಗೆ?

ಬಿಸಿಸಿಐ ತನ್ನ ಮಾಜಿ ಆಟಗಾರರ ಅನುಭವದ ಆಧಾರದ ಮೇಲೆ ಪಿಂಚಣಿ ಮೊತ್ತವನ್ನು ನಿರ್ಧರಿಸುತ್ತದೆ. 25ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನ ಆಡಿದ್ರೆ ಪ್ರತಿ ತಿಂಗಳು 70,000 ರೂಪಾಯಿ. 25ಕ್ಕಿಂತ ಕಡಿಮೆ ಟೆಸ್ಟ್ ಪಂದ್ಯಗಳನ್ನ ಆಡಿದ್ರೆ ಪ್ರತಿ ತಿಂಗಳು 60,000 ರೂಪಾಯಿ ನೀಡುತ್ತದೆ. ಪ್ರಥಮ ದರ್ಜೆ ಕ್ರಿಕೆಟಿಗರು ಆಡಿರುವ ಪಂದ್ಯಗಳ ಸಂಖ್ಯೆಗೆ ಅನುಗುಣವಾಗಿ ಪಿಂಚಣಿ ನಿಗದಿಪಡಿಸಲಾಗಿದೆ. ಮಾಜಿ ಮಹಿಳಾ ಕ್ರಿಕೆಟಿಗರಿಗೂ ಅವರ ಅರ್ಹತೆಗೆ ಅನುಗುಣವಾಗಿ ಪಿಂಚಣಿ ಸೌಲಭ್ಯವಿದೆ.

ಧೋನಿಯ ಒಟ್ಟು ಆದಾಯಕ್ಕೆ ಹೋಲಿಸಿದರೆ ಈ 70 ಸಾವಿರ ರೂಪಾಯಿ ಬಹಳ ಸಣ್ಣ ಮೊತ್ತವೆನಿಸಬಹುದು. ಏಕೆಂದರೆ 2025ರ ಐಪಿಎಲ್ ಸೀಸನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ಧೋನಿಯನ್ನು 4 ಕೋಟಿ ರೂಪಾಯಿಗೆ ರೀಟೈನ್ ಮಾಡಿಕೊಂಡಿದೆ. ಇದರ ಜೊತೆಗೆ ವಿವಿಧ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಮತ್ತು ಉದ್ಯಮಗಳಿಂದ ಅವರು ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

2004ರಲ್ಲಿ ಪದಾರ್ಪಣೆ ಮಾಡಿದ ಧೋನಿ, 16 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಒಟ್ಟಾರೆ 538 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 17,266 ರನ್ ಹಾಗೂ ವಿಕೆಟ್ ಕೀಪರ್ ಆಗಿ 195 ಸ್ಟಂಪಿಂಗ್‌ಗಳ ವಿಶ್ವ ದಾಖಲೆಯನ್ನು ಧೋನಿ ಹೊಂದಿದ್ದಾರೆ. ನಿವೃತ್ತಿಯ ನಂತರವೂ ಧೋನಿ ಅವರ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಅವರು ಪಡೆಯುವ ಸಂಭಾವನೆ ಮತ್ತು ಅಭಿಮಾನಿಗಳ ಪ್ರೀತಿಯೇ ಸಾಕ್ಷಿ.