ಚೆಸ್ ವಿಶ್ವಕಪ್ ಗೆದ್ದ ದಿವ್ಯಾ ದೇಶ್‌ಮುಖ್ ಅವರಿಗೆ ಮಹಾರಾಷ್ಟ್ರ ಸರ್ಕಾರ 3 ಕೋಟಿ ರೂ. ಬಹುಮಾನ ಘೋಷಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಚೆಕ್ ವಿತರಿಸಿದರು. ಸಿಜೆಐ ಗವಾಯಿ ಅವರು ದಿವ್ಯಾ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು.
ನಾಗ್ಪುರ: 2025ರ ಫಿಡೆ ಮಹಿಳಾ ಚೆಸ್ ವಿಶ್ವಕಪ್ ವಿಜೇತೆ ನಾಗ್ಪುರದ ದಿವ್ಯಾ ದೇಶ್‌ಮುಖ್ ಅವರನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ಸನ್ಮಾನಿಸಿದೆ. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗೌರವಿಸಿ, ರಾಜ್ಯ ಸರ್ಕಾರದ ವತಿಯಿಂದ 3 ಕೋಟಿ ರು. ಬಹುಮಾನದ ಚೆಕ್ ವಿತರಿಸಿದರು.
19 ವರ್ಷದ ದಿವ್ಯಾ, ಇತ್ತೀಚೆಗಷ್ಟೇ ಜಾರ್ಜಿಯಾದ ಬಾಟುಮಿಯಲ್ಲಿ ನಡೆದ ಚೆಸ್ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದವರೇ ಆದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಅವರನ್ನು ಸೋಲಿಸಿ ಪ್ರಶಸ್ತಿ ಎತ್ತಿಹಿಡಿದಿದ್ದರು.
ದಿವ್ಯಾ ಮನೆಗೆ ಸಿಜೆಐ ಗವಾಯಿ ಭೇಟಿ
ನಾಗ್ಪುರ: ಚೆಸ್ ವಿಶ್ವಕಪ್ ಗೆದ್ದ ದಿವ್ಯಾ ದೇಶ್‌ಮುಖ್ ಅವರ ನಾಗ್ಪುರದ ನಿವಾಸಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಶನಿವಾರ ಭೇಟಿ ನೀಡಿ ಚೆಸ್ ತಾರೆಗೆ ಅಭಿನಂದನೆ ಸಲ್ಲಿಸಿದರು.
ದಿವ್ಯಾ ಕುಟುಂಬಸ್ಥರು ಮತ್ತು ಸಿಜೆಐ ಹಲವು ವರ್ಷಗಳಿಂದ ಪರಿಚಯಸ್ಥರು. ದಿವ್ಯಾ ಭೇಟಿ ವೇಳೆ ನ್ಯಾ। ಗವಾಯಿ ತಮ್ಮ ಹಳೆ ನಂಟನ್ನು ಮೆಲುಕು ಹಾಕಿಕೊಂಡರು. ಈ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ ಅವರು, ‘ ನಾವು ಒಂದೇ ಕುಟುಂಬದ ರೀತಿಯಲ್ಲಿ ಬೆಳೆದವರು. ಇಲ್ಲಿಗೆ ಭೇಟಿ ನೀಡುತ್ತಿದ್ದಂತೆ 50-55 ವರ್ಷಗಳ ಹಿಂದಿನ ಸಂತಸದ ವಿಷಯಗಳು ನೆನಪಾಗುತ್ತಿದೆ’ ಎಂದರು.
ಮಕಾವ್ ಓಪನ್: ಲಕ್ಷ್ಯ, ತರುಣ್‌ಗೆ ಸೋಲು
ಮಕಾವ್: ಇಲ್ಲಿ ನಡೆಯುತ್ತಿರುವ ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಲಕ್ಷ್ಯ ಸೇನ್ ಹಾಗೂ ತರುಣ್ ಮನ್ನೇಪಲ್ಲಿ ಸೋತು ಹೊರಬಿದ್ದರು. ಲಕ್ಷ್ಯ 16-21, 9-21 ಗೇಮ್‌ಗಳಲ್ಲಿ ಇಂಡೋನೇಷ್ಯಾದ ಅಲ್ವಿ ಫರ್ಹಾನ್ ವಿರುದ್ಧ ಸೋತರೆ, ತರುಣ್ 21-19, 16-21, 16-21ರಲ್ಲಿ ಮಲೇಷ್ಯಾದ ಜಸ್ಟಿನ್ ಹೊ ವಿರುದ್ಧ ಪರಾಭವಗೊಂಡರು.
ಆ.21ಕ್ಕೆ ಭಾರತೀಯ ಬಾಕ್ಸಿಂಗ್ ಚುನಾವಣೆ:
ನವದಹಲಿ: ಹಲವು ದಿನಗಳಿಂದ ವಿಳಂಬವಾಗಿದ್ದ ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ಚುನಾವಣೆಗೆ ಕಡೆಗೂ ದಿನಾಂಕ ನಿಗದಿಯಾಗಿದ್ದು ಆ.21ಕ್ಕೆ ನಡೆಯಲಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಬಿಎಫ್ಐನ ತಾತ್ಕಾಲಿಕ ಸಮಿತಿ ಮುಖ್ಯಸ್ಥ ಹುದ್ದೆಗೆ ಅಜಯ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ವಿಶ್ವ ಬಾಕ್ಸಿಂಗ್ ಅಧ್ಯಕ್ಷ ಬೋರಿಸ್ ವಾನ್ ಡೆರ್ ವೊರ್ಸ್ಟ್ ಚುನಾವಣೆ ಮೇಲ್ವಿಚಾರಣೆ ನಡೆಸಲಿದ್ದಾರೆ. ಬಿಎಫ್‌ಐ ಅಧ್ಯಕ್ಷ ಹುದ್ದೆಗೆ ಅಜಯ್ ಸಿಂಗ್ ಹಾಗೂ ಕೇಂದ್ರದ ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಬಿಎಫ್‌ಐ ಅಧ್ಯಕ್ಷರಾಗಿ ಅಜಯ್ ಸಿಂಗ್ ಈಗಾಗಲೇ ತಲಾ 4 ವರ್ಷಗಳ ಎರಡು ಅವಧಿಯನ್ನು ಪೂರ್ಣಗೊಳಿಸಿದ್ದು, 3ನೇ ಹಾಗೂ ಕೊನೆಯ ಅವಧಿಗೆ ಸಿದ್ಧರಾಗಿದ್ದಾರೆ.
ಹಿಂದಿನ ಪದಾಧಿಕಾರಗಳ ಅಧಿಕಾರವಧಿ ಫೆ.2ರಂದೇ ಅಂತ್ಯವಾಗಿತ್ತು. ಬಳಿಕ ಮಾ.28ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಹಲವರು ಅಪಸ್ವರ ಎತ್ತಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಮುಂದೂಡಿಕೆಯಾಗಿತ್ತು. ಬಳಿಕ ವಿಶ್ವ ಬಾಕ್ಸಿಂಗ್ ಸಮಿತಿ ಮಧ್ಯಂತರ ಸಮಿತಿ ರಚಿಸಿ, ಆ.31ರೊಳಗೆ ಚುನಾವಣೆ ನಡೆಸುವಂತೆ ಗಡುವು ನೀಡಿತ್ತು.
