ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕೊನೆರು ಹಂಪಿ ಮತ್ತು ದಿವ್ಯಾ ದೇಶಮುಖ್ ನಡುವಿನ ಫೈನಲ್‌ ಪಂದ್ಯ ಟೈ ಆಗಿದೆ. ಟೈಬ್ರೇಕರ್‌ನಲ್ಲಿ ಇಬ್ಬರೂ ಭಾರತೀಯ ಆಟಗಾರ್ತಿಯರು ಸೋಮವಾರ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ರ್‍ಯಾಪಿಡ್‌ ಮತ್ತು ಬ್ಲಿಟ್ಜ್‌ ಗೇಮ್‌ಗಳ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಬಟುಮಿ(ಜಾರ್ಜಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಹಾಗೂ ಇಂಟರ್‌ನ್ಯಾಷನಲ್‌ ಮಾಸ್ಟರ್‌ ದಿವ್ಯಾ ದೇಶ್‌ಮುಖ್‌ ನಡುವಿನ ಫಿಡೆ ಚೆಸ್‌ ವಿಶ್ವಕಪ್‌ ಫೈನಲ್‌ ಟೈ ಬ್ರೇಕರ್‌ಗೆ ಸಾಗಿದೆ. ಇಬ್ಬರು ಭಾರತೀಯರ ನಡುವೆ ಶನಿವಾರ ನಡೆದಿದ್ದ ಫೈನಲ್‌ನ ಮೊದಲ ಗೇಮ್‌ ಡ್ರಾಗೊಂಡಿತ್ತು. ಭಾನುವಾರದ 2ನೇ ಗೇಮ್‌ ಕೂಡಾ ಡ್ರಾದಲ್ಲಿ ಅಂತ್ಯಗೊಂಡಿತು. ಹೀಗಾಗಿ ಫಲಿತಾಂಶ ನಿರ್ಧರಿಸಲು ಇವರಿಬ್ಬರ ನಡುವೆ ಸೋಮವಾರ ಟೈ ಬ್ರೇಕರ್‌ ನಡೆಯಲಿದೆ.

ಭಾನುವಾರ ದಿವ್ಯಾ ಕಪ್ಪು ಕಾಯಿಗಳೊಂದಿಗೆ ಆಡಿದರೆ, ಕೊನೆರು ಬಿಳಿ ಕಾಯಿಗಳೊಂದಿಗೆ ಕಣಕ್ಕಿಳಿದರು. ಮೊದಲ ಗೇಮ್‌ನಲ್ಲಿ ಕೊನೆರು ವಿರುದ್ಧ ಮೇಲುಗೈ ಸಾಧಿಸಿದ್ದ ದಿವ್ಯಾ, 2ನೇ ಗೇಮ್‌ನಲ್ಲಿ ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಪಂದ್ಯ 34 ನಡೆಗಳ ಬಳಿಕ ಡ್ರಾಗೊಂಡಿತು.

ಟೈ ಬ್ರೇಕರ್‌ ಹೇಗೆ?

ಫೈನಲ್‌ನ 2 ಕ್ಲಾಸಿಕಲ್‌ ಗೇಮ್‌ ಡ್ರಾಗೊಂಡಿವೆ. ಹೀಗಾಗಿ ಸೋಮವಾರ ಟೈ ಬ್ರೇಕರ್‌ ನಡೆಯಲಿದೆ. ಇದರಲ್ಲಿ 2 ಸುತ್ತಿನ, ತಲಾ 10 ನಿಮಿಷಗಳ ರ್‍ಯಾಪಿಡ್‌ ಗೇಮ್‌ ಆಡಿಸಲಾಗುತ್ತದೆ. ಅಲ್ಲೂ ಟೈ ಆದರೆ ತಲಾ 5 ನಿಮಿಷಗಳ ಮತ್ತೆರಡು ಗೇಮ್‌ ನಡೆಸಲಾಗುತ್ತದೆ. ಫಲಿತಾಂಶ ಬರದಿದ್ದರೆ ತಲಾ 3 ನಿಮಿಷಗಳ 2 ಬ್ಲಿಟ್ಜ್‌ ಗೇಮ್‌ ಆಡಿಸಲಾಗುತ್ತದೆ. ಅಗತ್ಯಬಿದ್ದರೆ ಫಲಿತಾಂಶ ಬರುವವರೆಗೂ 3+2 ಬ್ಲಿಟ್ಜ್‌ ಗೇಮ್‌ ನಡೆಸಲಾಗುತ್ತದೆ.

ವಿಶ್ವ ಈಜು: 100 ಮೀ. ಫೈನಲ್‌ಗೇರಲು ರಾಜ್ಯದ ಎಸ್‌.ಪಿ. ಲಿಖಿತ್‌ ವಿಫಲ

ಸಿಂಗಾಪುರ: ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಪರ್ಧಿಗಳು ನಿರಾಸೆ ಅನುಭವಿಸಿದ್ದಾರೆ. ಭಾನುವಾರ ನಡೆದ ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯ ಹೀಟ್ಸ್‌ನಲ್ಲಿ ಕರ್ನಾಟಕದ ಎಸ್‌.ಪಿ.ಲಿಖಿತ್‌ 1 ನಿಮಿಷ 01.99 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರು ಒಟ್ಟಾರೆ 40ನೇ ಸ್ಥಾನ ಪಡೆದರು. ಅಗ್ರ-16 ಸ್ಥಾನ ಪಡೆದ ಸ್ಪರ್ಧಿಗಳು ಸೆಮಿಫೈನಲ್‌ಗೇರಿದರು. 

ಇನ್ನು, ಪುರುಷರ 400 ಮೀ. ಫ್ರೀಸ್ಟೈಲ್‌ನ ಹೀಟ್ಸ್‌ನಲ್ಲಿ ಆರ್ಯನ್‌ ನೆಹ್ರಾ 4 ನಿಮಿಷ 00.39 ಸೆಕೆಂಡ್‌ಗಳಲ್ಲಿ ಕ್ರಮಿಸಿ 37ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಗ್ರ-8 ಮಂದಿ ಫೈನಲ್‌ ತಲುಪಿದರು.

ಡುರಾಂಡ್ ಕಪ್‌: ಸತತ 2ನೇ ಪಂದ್ಯದಲ್ಲೂ ಗೆಲ್ಲದ ಸೌತ್ ಯುನೈಟೆಡ್ ಎಫ್ಸಿ

ಕೋಲ್ಕತಾ: ಏಷ್ಯಾದ ಅತಿ ಹಳೆಯ ಫುಟ್ಬಾಲ್ ಟೂರ್ನಿ ಡುರಾಂಡ್ ಕಪ್‌ನ 134ನೇ ಆವೃತ್ತಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ತಂಡ ಎನಿಸಿರುವ ಬೆಂಗಳೂರಿನ ಸೌತ್ ಯುನೈಟೆಡ್ ಎಫ್‌ಸಿ ಸತತ 2ನೇ ಪಂದ್ಯದಲ್ಲೂ ಗೆಲುವಿನಿಂದ ವಂಚಿತವಾಗಿದೆ. 

ಆರಂಭಿಕ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ವಿರುದ್ಧ ಸೋತಿದ್ದ ಸೌತ್ ಯುನೈಟೆಡ್ ಭಾನುವಾರ ಇಂಡಿಯನ್‌ ಏರ್‌ಫೋರ್ಸ್‌ ವಿರುದ್ಧ 3-3 ಗೋಲುಗಳಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಮೊದಲಾರ್ಧದಲ್ಲಿ ಸೌತ್ ಯುನೈಟೆಡ್ 2-1ರಿಂದ ಮುನ್ನಡೆಯಲ್ಲಿದ್ದರೂ, ದ್ವಿತೀಯಾರ್ಧದಲ್ಲಿ 2 ಗೋಲು ಬಾರಿಸಿದ ಏರ್‌ಫೋರ್ಸ್‌ ಪಂದ್ಯ ಡ್ರಾಗೊಳಿಸಿತು.

ಕ್ಸಾವಿ ಹೆಸರಲ್ಲಿ ಫುಟ್ಬಾಲ್‌ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು 19ರ ವಿದ್ಯಾರ್ಥಿ!

ನವದೆಹಲಿ: ಭಾರತ ಫುಟ್ಬಾಲ್‌ ತಂಡದ ಕೋಚ್‌ ಹುದ್ದೆಗೆ ಸ್ಪೇನ್‌, ಬಾರ್ಸಿಲೋನಾದ ದಿಗ್ಗಜ ಆಟಗಾರ ಕ್ಸಾವಿ ಹೆರ್ನಾಂಡೆಜ್‌ ಅರ್ಜಿ ಸಲ್ಲಿಸಿದ್ದರು ಎಂದು ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಎಐಎಫ್‌ಎಫ್‌), ಅರ್ಜಿಯ ಸತ್ಯಾಸತ್ಯತೆ ಬಗ್ಗೆ ಖಚಿತ ಮಾಹಿತಿಯಿಲ್ಲ ಎಂದಿತ್ತು. 

ಈ ವಿಚಾರ ಈಗ ಮತ್ತೊಂದು ತಿರುವು ಪಡೆದಿದ್ದು, ತಮಿಳುನಾಡಿನ 19 ವರ್ಷದ ವಿದ್ಯಾರ್ಥಿಯೊಬ್ಬ ಅರ್ಜಿಯನ್ನು ತಾನೇ ಸಲ್ಲಿಸಿದ್ದಾಗಿ ಹೇಳಿಕೊಂಡಿದ್ದಾನೆ. ‘ಚಾಟ್‌ಜಿಪಿಟಿ ಮೂಲಕ ಅರ್ಜಿ ರಚಿಸಿ, ಕ್ಸಾವಿ ಹೆರ್ನಾಂಡೆಜ್‌ ಹೆಸರಲ್ಲಿ ಎಐಎಫ್‌ಎಫ್‌ಗೆ ಕಳುಹಿಸಿದ್ದೆ. ಅದನ್ನು ಅವರು ಗಮನಿಸಿರಬಹುದು’ ಎಂದಿದ್ದಾನೆ.