ಆರ್‌ಸಿಬಿಗೆ ಯಾರಾದರೂ ಒಬ್ಬರು ಪಕ್ಕಾ ಅಭಿಮಾನಿಗಳೇನಾದರೂ ಇದ್ದರೆ ಅದು ಸ್ಯಾಂಡಲ್‌ವುಡ್‌ ನಿರ್ದೇಶಕ ಸಿಂಪಲ್‌ ಸುನಿ. ತಂಡ ಗೆಲ್ಲಲಿ, ಸೋಲಲಿ ಏನೇ ಆದರೂ, ಇಷ್ಟು ವರ್ಷಗಳಿಂದ ಅವರು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಲೇ ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು (ಏ.3): ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಸಾಧಿಸಿರುವ ಯಶಸ್ಸು ಅಷ್ಟಕ್ಕಷ್ಟೇ ಆಗಿದ್ದರೂ, ತಂಡದ ಅಭಿಮಾನಿ ಬಳಗವೇನೂ ಕಡಿಮೆಯಾಗಿಲ್ಲ. ಕನ್ನಡಿಗರೇ ಇರದಂಥ ಐಪಿಎಲ್‌ನ ಕರ್ನಾಟಕ ಟೀಮ್‌ ಎನ್ನುವ ಟೀಕೆಗಳ ನಡುವೆಯೂ 2023ರ ಐಪಿಎಲ್‌ನಲ್ಲಿ ಆರ್‌ಸಿಬಿ ಭರ್ಜರಿಯಾಗಿ ಅಭಿಯಾನ ಆರಂಭಿಸಿದೆ. ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸುವ ಮೂಲಕ ಫಾಫ್‌ ಡು ಪ್ಲೆಸಿಸ್ ಸಾರಥ್ಯದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತನ್ನ ಪ್ರಯಾಣ ಆರಂಭಿಸಿದೆ. ಇಲ್ಲಿಯವರೆಗೂ ಲೀಗ್‌ನ ಮೊದಲ ಪಂದ್ಯ ದೇವರಿಗೆ ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಫಾರ್‌ ಎ ಚೇಂಜ್‌ ಎನ್ನುವಂತೆ ಮೊದಲ ಪಂದ್ಯದಲ್ಲಿಯೇ ಭರ್ಜರಿ ವಿಜಯ ಸಾಧಿಸಿದ್ದಾರೆ. ಅದೂ ಯಾರ ಮೇಲೆ.. ಐಪಿಎಲ್‌ನ ಮಹಾ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮೇಲೆ. ಇದರ ಬೆನ್ನಲ್ಲಿಯೇ ಆರ್‌ಸಿಬಿ ಅಭಿಮಾನಿಗಳ ಖುಷಿ ಹೇಳತೀರದಾಗಿದೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಆರ್‌ಸಿಬಿ ಪರಮಭಕ್ತ ಸ್ಯಾಂಡಲ್‌ವುಡ್‌ ನಿರ್ದೇಶಕ ಸಿಂಪಲ್‌ ಸುನಿ. ಮುಂಬೈ ವಿರುದ್ಧ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಬೆನ್ನಲ್ಲಿಯೇ ಅವರು ಮಾಡಿರುವ ಟ್ವೀಟ್‌ಗೆ ಬರೋಬ್ಬರಿ 30 ಸಾವಿರ ವೀವ್ಸ್‌ಗಳು ಬಂದಿವೆ. 2 ಸಾವಿರ ಲೈಕ್ಸ್‌ಗಳು ಬಂದಿದ್ದು, ಕಾಮೆಂಟ್ಸ್‌ಗಳು ದಾಖಲಾಗಿವೆ.

ಸಿಂಪಲ್‌ ಸುನಿ (Simple Suni) ಮಾಡಿರುವ ಟ್ವೀಟ್‌: ;ಮೊದಲಬಾರಿ ಒಂದು ಬಾಲ್ ಕೂಡ ಚಿಂತಿತನಾಗದೇ ಆರ್‌ಸಿಬಿ (RCB) ಮ್ಯಾಚ್ ನೋಡಿದೆ. 40ಸಾವಿರ ಜನರ ಗ್ರೌಂಡ್ ನಲ್ಲಿ 36 ಸಾವಿರ ಆರ್‌ಸಿಬಿ ಅಭಿಮಾನಿಗಳು. ಜಾತಿ, ಮತ, ಭಾಷೆ, ಧರ್ಮ, ವಯಸ್ಸು, ಅಂತಸ್ತಿಕೆ ಬಿಟ್ಟು ಒಗ್ಗಟ್ಟಾಗಿ ಖುಷಿಯಾಗಿ ಕುಣಿಯುತ್ತಿದ್ದನ್ನು ನೋಡಿ ಕಣ್ತುಂಬಿ ಬಂತು. ಕೋಟಿ ಕೋಟಿ ಜನರ ಮನದರಕೆ, ಈ ಸಲ ಕಪ್ "ನಮ್ದೇ"ಆಗಬೇಕೆಂದು ಆ ದೇವರಲ್ಲಿ ಕೋರಿಕೆ ಎಂದು ಅವರು ಬರೆದುಕೊಂಡಿದ್ದಾರೆ. ಇನ್ನೂ ಅಚ್ಚರಿಯ ವಿಚಾರವೆಂದರೆ, ಅವರು ಈ ಟ್ವೀಟ್‌ ಮಾಡಿದ್ದು ಸೋಮವಾರ ಮುಂಜಾನೆ 2.30ರ ಸುಮಾರಿಗೆ. 

Scroll to load tweet…

IPL ಟೂರ್ನಿಯಲ್ಲಿ ಭಾರತದ ಯಾವೊಬ್ಬ ಬ್ಯಾಟರ್‌ ಮಾಡಲಾಗದ ಸಾಧನೆ ಬರೆದ RCB ಹುಲಿ ವಿರಾಟ್ ಕೊಹ್ಲಿ

ಇನ್ನೂ ಅವರ ಟ್ವೀಟ್‌ಗೆ ಬಂದಿರುವ ಕಾಮೆಂಟ್ಸ್‌ಗಳು ಭಿನ್ನವಾಗಿದೆ. 'ಏಳು ಬೀಳು ಏನೂ ಎಣಿಸದೆ, ಆರ್ ಸಿ ಬಿ ಯ ಎಲ್ಲಾ ಸಮಯದಲ್ಲೂ ನಿಮ್ಮ ಪ್ರೀತಿಯ ಪ್ರಾಮಾಣಿಕ ಟ್ವೀಟ್ ಗಳ ಫಲವೇ ಇರಬೇಕು..ಗುಂಡಿಗೆಗೆ ಹೊಲಿಗೆ ಹಾಕಿಸಿ, ಗಂಡುಗಲಿ ಕುಮಾರ ರಾಮರಂತೆ ನಿಂತ , ಎಲ್ಲಾ ಫ್ಯಾನ್ಸ್ ಗಳ ಪ್ರೀತಿಯ ಫಲವೇ ಇರಬೇಕು' ಎಂದು ನಟ ಚೇತನ್‌ ಬರೆದುಕೊಂಡಿದ್ದಾರೆ.

ಮುಂಬೈ 5, ಚೆನ್ನೈ 4 ಟ್ರೋಫಿ ಗೆದ್ದಿರಬಹುದು, ಆದ್ರೆ..? ಟೀಕಾಕಾರರಿಗೆ ವಾರ್ನಿಂಗ್ ಕೊಟ್ಟ ವಿರಾಟ್ ಕೊಹ್ಲಿ..!

'ಮೊದಲನೇ ಮ್ಯಾಚ್ ದೇವರಿಗಲ್ಲ ಅಭಿಮಾನಿ ದೇವರುಗಳಿಗೆ ಅರ್ಪಿಸಿದ ಕೊಹ್ಲಿ', 'ಕಪ್ ಗೆಲ್ಲಬಹುದು RCB ಇನ್ನೂ ಹಿಂಗೆ ಕ್ರೇಜ್ ಜಾಸ್ತಿ ಆಗ್ತಾನೆ ಇರ್ಬೇಕು..' ಎಂದು ಕೆಲವವರು ಟ್ವೀಟ್‌ ಮಾಡಿದ್ದಾರೆ. ಈ ಸಲ ನೀವೇನೇ ಹೇಳಿ ಪಕ್ಕಾ ಇಎಸ್‌ಸಿಎನ್‌ ಎಂದು ಇನ್ನೊಬ್ಬರು ಬರೆದಿದ್ದಾರೆ. ಇಎಸ್‌ಸಿಎನ್‌ ಎಂದರೆ, ಈ ಸಲ ಕಪ್‌ ನಮ್ದೆ ಎಂದರ್ಥ. 'ಸಿಂಪಲ್ಲಾಗಿ ಒಂದು ಕನಸು, 2023ರ ಹದಿನಾರನೆ ಕನಸು ಸುನಿ ಸರ್' ಎಂದು ಇನ್ನೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ. 'ಇದು ಆರ್‌ಸಿಬಿಯ ಪವರ್‌, ಈ ಸಲ ಕಪ್‌ ನಮ್ದೆ' ಎಂದು ಆರ್‌ಸಿಬಿಯ ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. 'ಗುರು ನೀನ್ ತಾನೇ ಅನುಶ್ರೀ ಶೋ ಅಲ್ಲಿ,, ಆರ್‌ಸಿಬಿ ಕಪ್ ಗೆಲ್ಲಬಾರ್ದು, ಗೆದ್ರೆ ಈ ಸಲ ಕಪ್ ನಮ್ದೇ ಅನ್ನೋ ಕ್ರೇಜ್ ಹೋಗುತ್ತೆ ಅಂದಿದ್ದು, ಈ ಡಬಲ್ ಸ್ಟ್ಯಾಂಡರ್ಡ್ ಯಾಕೆ..' ಎಂದು ಸಿಂಪಲ್‌ ಸುನಿಗೆ ಪ್ರಶ್ನೆ ಮಾಡಿದ್ದಾರೆ.