ಬೆಂಗಳೂರು(ಡಿ.14): ಕರ್ನಾಟಕ ವಿರುದ್ಧ ಗುರುವಾರ ದಿಂಡಿಗಲ್‌ನಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿ ಪಂದ್ಯದ ಬಳಿಕ ತಮಿಳುನಾಡು ತಂಡದ ಹಿರಿಯ ಆಟಗಾರ ದಿನೇಶ್‌ ಕಾರ್ತಿಕ್‌ ಉದ್ಧಟತನದಿಂದ ವರ್ತಿಸಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಸೋಲಿನ ಹತಾಶೆಯಲ್ಲಿದ್ದ ಕಾರ್ತಿಕ್‌, ಪಂದ್ಯ ಮುಕ್ತಾಯಗೊಂಡ ನಂತರ ಕರ್ನಾಟಕ ನಾಯಕ ಕರುಣ್‌ ನಾಯರ್‌ ಜತೆ ವಾಗ್ವಾದಕ್ಕಿಳಿದರು. ಅಷ್ಟೇ ಅಲ್ಲ, ಬಹುಮಾನ ವಿತರಣಾ ಸಮಾರಂಭ ಮುಕ್ತಾಯಗೊಂಡ ಬಳಿಕವೂ ಜಟಾಪಟಿ ಮುಂದುವರಿಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಣಜಿ ಟ್ರೋಫಿ: ತಮಿಳುನಾಡು ಮಣಿಸಿ ಶುಭಾರಂಭ ಮಾಡಿದ ಕರ್ನಾಟಕ!

ಆಟಗಾರರು ಮೈದಾನದಿಂದ ಹೊರಡಲು ಸಿದ್ಧರಾಗುತ್ತಿದ್ದ ವೇಳೆ ಡ್ರೆಸ್ಸಿಂಗ್‌ ಕೋಣೆ ಬಳಿಯೂ ಕಾರ್ತಿಕ್‌, ಕರುಣ್‌ ಮೇಲೆ ಹರಿಹಾಯ್ದರು. ಕರ್ನಾಟಕ ತಂಡದ ಕೋಚ್‌ಗಳಾದ ಯರ್ರೆ ಗೌಡ್‌ ಹಾಗೂ ಎಸ್‌.ಅರವಿಂದ್‌ ಜತೆ ಅಂಪೈರ್‌ಗಳು ಹಾಗೂ ಮ್ಯಾಚ್‌ ರೆಫ್ರಿ ಸಹ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಘಟನೆ, ಭಾರತೀಯ ಕ್ರಿಕೆಟ್‌ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ರಣಜಿ ಟ್ರೋಫಿ: ಗೌತಮ್‌ ಆಲ್ರೌಂಡ್‌ ಶೋ!

ಆಗಿದ್ದೇನು?: 
ಕರ್ನಾಟಕ ಮೊದಲ ಇನ್ನಿಂಗ್ಸ್‌ ಬ್ಯಾಟ್‌ ಮಾಡುವಾಗ ತಮಿಳುನಾಡು ಆಟಗಾರರು ವಿಕೆಟ್‌ ಪಡೆಯಲು ಮಿತಿ ಮೀರಿ ಮನವಿ ಸಲ್ಲಿಸಿದರು. ಜತೆಗೆ ಅಂಪೈರ್‌ಗಳ ಜತೆ ಅನುಚಿತವಾಗಿ ವರ್ತಿಸಿದರು. ಇದು ಮ್ಯಾಚ್‌ ರೆಫ್ರಿಯ ಗಮನಕ್ಕೆ ಬಂದ ಕಾರಣ, ಹಿರಿಯ ಆಟಗಾರ ಮುರಳಿ ವಿಜಯ್‌ಗೆ ಮೊದಲ ದಿನವೇ ಪಂದ್ಯದ ಸಂಭಾವನೆಯ ಶೇ.10ರಷ್ಟನ್ನು ದಂಡವಾಗಿ ವಿಧಿಸಲಾಯಿತು. 2ನೇ ಇನ್ನಿಂಗ್ಸ್‌ನಲ್ಲಿ ಕೆ.ಗೌತಮ್‌ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿದಾಗ, ತಮಿಳುನಾಡು ಕ್ಷೇತ್ರರಕ್ಷಕರು ‘ಬೌಂಡರಿಗಳು ಬರುತ್ತಿಲ್ಲ, ಬೌಂಡರಿಗಳು ಬರುತ್ತಿಲ್ಲ’ ಎಂದು ಕಿಚ್ಚಾಯಿಸುವ ಪ್ರಯತ್ನ ನಡೆಸಿದರು. ಗೌತಮ್‌ ಒಂದೆರಡು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಒಂದು ಚೆಂಡು ಮೈದಾನದಿಂದ ಹೊರಹೋಯಿತು. ದೊಡ್ಡ ಹೊಡೆತ ಬಾರಿಸುವ ಮತ್ತೊಂದು ಪ್ರಯತ್ನದಲ್ಲಿ ಗೌತಮ್‌ ವಿಫಲರಾಗಿ, ವಿಕೆಟ್‌ ಕಳೆದುಕೊಂಡರು. ತಮಿಳುನಾಡು ತಂಡದ ಯೋಜನೆ ಕೈಹಿಡಿಯಿತು.

ಇದನ್ನೂ ಓದಿ: ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ತಮಿಳುನಾಡು ತಂಡ ಈ ರೀತಿಯ ತಂತ್ರವನ್ನು ಆರಂಭಿಸಿದಾಗ ಸಹಜವಾಗಿಯೇ ಕರ್ನಾಟಕ ಸಹ ಅದೇ ರೀತಿಯಲ್ಲಿ ಉತ್ತರಿಸಿತು. ತಮಿಳುನಾಡು 181 ರನ್‌ಗಳ ಸವಾಲಿನ ಗುರಿ ಬೆನ್ನತ್ತುವಾಗ ಕರ್ನಾಟಕ ಆಟಗಾರರು ವಿಕೆಟ್‌ ಪಡೆಯಲು ಮಿತಿ ಮೀರಿ ಮನವಿ ಸಲ್ಲಿಸಿದರು. ನಿರಂತರವಾಗಿ ಮಾತನಾಡುತ್ತಾ, ತಮ್ಮ ಆಟಗಾರರ ಮೇಲೆ ಮಾನಸಿಕ ಒತ್ತಡ ಹೇರಿದರು ಎಂಬ ಕಾರಣಕ್ಕೆ ಕಾರ್ತಿಕ್‌ ಸಿಟ್ಟು ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ವಿಷಯವನ್ನು ಸ್ವರ್ತ ತಮಿಳುನಾಡು ನಾಯಕ ವಿಜಯ್‌ ಶಂಕರ್‌ ಒಪ್ಪಿಕೊಂಡಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪಂದ್ಯಗಳಲ್ಲಿ ಈ ರೀತಿಯ ಪ್ರಸಂಗಗಳು ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಪಂದ್ಯ ಮುಕ್ತಾಯಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ್‌ ಶಂಕರ್‌, ‘ಕರ್ನಾಟಕ ಆಟಗಾರರ ವರ್ತನೆಯಿಂದ ಕಾರ್ತಿಕ್‌ಗೆ ಕಿರಿಕಿರಿಯಾಯಿತು. ವಿಕೆಟ್‌ ಪಡೆಯಲು ಮಿತಿ ಮೀರಿ ಮನವಿ ಸಲ್ಲಿಸಿದ್ದು ಸಹ ಸಿಟ್ಟು ತರಿಸಿತು. ಅವರೊಬ್ಬ ಹಿರಿಯ ಆಟಗಾರ, ಆದರೂ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಅಂತಿಮವಾಗಿ ಇಂತಹ ಘಟನೆಗಳನ್ನು ಮರೆತು ಮುನ್ನಡೆಯಬೇಕು’ ಎಂದರು.

ಕಾರ್ತಿಕ್‌ ಸಿಟ್ಟಿಗೆ ಕಾರಣವೇನು?
ಮೊದಲ ಇನ್ನಿಂಗ್ಸ್‌ನಲ್ಲಿ 113 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಕಾರ್ತಿಕ್‌, ಕರ್ನಾಟಕದ 336 ರನ್‌ಗಳ ಮೊತ್ತಕ್ಕೆ ತಮಿಳುನಾಡು ಹತ್ತಿರ ಬರಲು ನೆರವಾಗಿದ್ದರು. 2ನೇ ಇನ್ನಿಂಗ್ಸ್‌ನಲ್ಲೂ ಅವರು ಹೋರಾಟ ನಡೆಸಿದರು. ಅದರ ಹೊರತಾಗಿಯೂ ಕೆ.ಗೌತಮ್‌ರ ಸಾಹಸದಿಂದ ಕರ್ನಾಟಕ ಕೊನೆ ಓವರಲ್ಲಿ ಗೆಲುವು ಸಾಧಿಸಿತು. ಅಲ್ಲದೇ, ಈ ಋುತುವಿನ ವಿಜಯ್‌ ಹಜಾರೆ ಏಕದಿನ ಟೂರ್ನಿಯ ಫೈನಲ್‌, ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ತಂಡ ಕರ್ನಾಟಕ ವಿರುದ್ಧ ಸೋಲುಂಡಿತ್ತು. ಸತತ 3 ಪಂದ್ಯಗಳಲ್ಲಿ ಪರಾಭವಗೊಂಡಿದ್ದು, ಕಾರ್ತಿಕ್‌ ಹತಾಶೆಗೊಳ್ಳಲು ಕಾರಣ ಎನ್ನಲಾಗಿದೆ.

ಸಾಮಾಜಿಕ ತಾಣಗಳಲ್ಲಿ ಕಾರ್ತಿಕ್‌ ವಿರುದ್ಧ ಟೀಕೆ
ಕಳೆದ ಒಂದೂವರೆ ದಶಕದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡುತ್ತಿರುವ ದಿನೇಶ್‌ ಕಾರ್ತಿಕ್‌, ಅವರಿಗಿಂತ ಕಿರಿಯ ಆಟಗಾರನ ಜತೆ ಈ ರೀತಿ ನಡೆದುಕೊಂಡಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಪಂದ್ಯದ ವೇಳೆ ಆಟಗಾರರಲ್ಲಿ ಪರಸ್ಪರ ಮಾತಿನ ಚಕಮಕಿ ಸಹಜ. ಆದರೆ ಪಂದ್ಯದ ಮುಗಿದ ಬಳಿಕ ಡ್ರೆಸ್ಸಿಂಗ್‌ ಕೋಣೆ ಬಳಿಯೂ ಜಟಾಪಟಿ ಮುಂದುವರಿಸಿದ್ದು ತಪ್ಪು ಎಂಬ ಅಭಿಪ್ರಾಯಗಳು ಕ್ರಿಕೆಟ್‌ ಅಭಿಮಾನಿಗಳಿಂದ ವ್ಯಕ್ತವಾಗಿದೆ.