Asianet Suvarna News Asianet Suvarna News

ಅಶ್ವಿನ್ ಮಾರಕ ದಾಳಿ: ಇನಿಂಗ್ಸ್‌ ಸೋಲಿನ ಭೀತಿಯಲ್ಲಿ ಇಂಗ್ಲೆಂಡ್...!

ಭಾರತ ತಂಡವನ್ನು 477 ರನ್‌ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಾವೆಸೆದ ಮೊದಲ ಓವರ್‌ನಲ್ಲೇ ಬೆನ್ ಡಕೆಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಇಂಗ್ಲೆಂಡ್‌ಗೆ ಆರಂಭಿಕ ಶಾಕ್ ನೀಡಿದರು.

Dharamsala Test India On Top vs England Ravichandran Ashwin Eyes More Wickets kvn
Author
First Published Mar 9, 2024, 12:25 PM IST

ಧರ್ಮಶಾಲಾ(ಮಾ.09): ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಪ್ರವಾಸಿ ಇಂಗ್ಲೆಂಡ್ ತಂಡವು ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದೆ. ಮೂರನೇ ದಿನದಾಟದ ಲಂಚ್‌ ಬ್ರೇಕ್ ವೇಳೆಗೆ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 103 ರನ್‌ಗಳಿಗೆ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದಾರೆ. ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಭಾರತ ತಂಡವನ್ನು 477 ರನ್‌ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಾವೆಸೆದ ಮೊದಲ ಓವರ್‌ನಲ್ಲೇ ಬೆನ್ ಡಕೆಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಇಂಗ್ಲೆಂಡ್‌ಗೆ ಆರಂಭಿಕ ಶಾಕ್ ನೀಡಿದರು. ಇದಾದ ಕೆಲ ಹೊತ್ತಿನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ ಖಾತೆ ತೆರೆಯುವ ಮುನ್ನವೇ ಅಶ್ವಿನ್‌ಗೆ ಎರಡನೇ ಬಲಿಯಾದರು. ಇಂಗ್ಲೆಂಡ್ ತಂಡವು 21 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಓಲಿ ಪೋಪ್ 3 ಬೌಂಡರಿ ಸಹಿತ 23 ರನ್ ಬಾರಿಸಿದರಾದರೂ ಅಶ್ವಿನ್ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಿದರು. ಈ ವೇಳೆಗೆ ಇಂಗ್ಲೆಂಡ್ ಸ್ಕೋರ್ 36ಕ್ಕೆ 3.

ಆರಂಭದಲ್ಲಿ 3 ವಿಕೆಟ್ ಕಳೆದುಕೊಂಡು ಕಂಗಾಲಾದ ಇಂಗ್ಲೆಂಡ್ ತಂಡಕ್ಕೆ 4ನೇ ವಿಕೆಟ್‌ಗೆ ಜೋ ರೂಟ್ ಹಾಗೂ ಜಾನಿ ಬೇರ್‌ಸ್ಟೋವ್ 58 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬೇರ್‌ಸ್ಟೋವ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 39 ರನ್ ಬಾರಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ನಾಯಕ ಬೆನ್ ಸ್ಟೋಕ್ಸ್‌ ಕೇವಲ 2 ರನ್‌ ಗಳಿಸಿ ಅಶ್ವಿನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಸದ್ಯ ಜೋ ರೂಟ್ ನೆಲಕಚ್ಚಿ ಆಡುವ ಪ್ರಯತ್ನ ನಡೆಸಿದ್ದಾರೆ. ಜೋ ರೂಟ್ ಸದ್ಯ 52 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 34 ರನ್ ಬಾರಿಸಿದ್ದಾರೆ. 
 

Follow Us:
Download App:
  • android
  • ios