2027ರ ಏಕದಿನ ವಿಶ್ವಕಪ್ ಆಡುವ ಗುರಿ ಹೊಂದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ. ಸರಣಿಯ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಬೇಕು, ಲಯ ಕಂಡುಕೊಳ್ಳಲು ಒಂದೆರಡು ಪಂದ್ಯಗಳನ್ನು ವ್ಯರ್ಥ ಮಾಡುವಂತಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಬೆಂಗಳೂರು: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಭಾರತ ಕ್ರಿಕೆಟ್‌ನ ದಿಗ್ಗಜ ಆಟಗಾರರಾಗಿ ಬೆಳೆದು ನಿಂತಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಈ ಇಬ್ಬರು ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಇಬ್ಬರೂ 2027ರ ಏಕದಿನ ವಿಶ್ವಕಪ್ ಆಡ್ತಾರಾ ಎನ್ನುವ ಕುತೂಹಲಕ್ಕೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.
ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋ-ಕೊ ಜೋಡಿ ಕೊನೆಯ ಬಾರಿಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಲಾರ್ಡ್ಸ್ ಏಕದಿನ ಪಂದ್ಯವು ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆಯಿದೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಆದರೆ ಆ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದಿದ್ದರು. ಇನ್ನು ಇದೇ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಅರ್ಧಶತಕ ಸಿಡಿಸಿದ್ದರು. ಆದರೆ ಈ ಇಬ್ಬರು ಆಟಗಾರರು ಮೊದಲ ಏಕದಿನ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾಗಿದ್ದರು. ಅದರಲ್ಲೂ ರೋಹಿತ್ ಶರ್ಮಾ ಮೊದಲೆರಡು ಏಕದಿನ ಪಂದ್ಯದಲ್ಲಿಸ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.
ರೋ-ಕೊ ಜೋಡಿಗೆ ದೀಪ್‌ದಾಸ್ ಗುಪ್ತಾ ಖಡಕ್ ವಾರ್ನಿಂಗ್
ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದೀಪ್‌ದಾಸ್ ಗುಪ್ತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಲಯ ಕಂಡುಕೊಳ್ಳಲು ಒಂದೆರಡು ಮ್ಯಾಚ್ ಹಾಳು ಮಾಡದೇ, ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಲು ರೋ-ಕೊ ಜೋಡಿಗೆ ಎಚ್ಚರಿಕೆ ನೀಡಿದ್ದಾರೆ.
'ಇದು ಅವರೊಂದಿಗೆ(ರೋಹಿತ್ ಮತ್ತು ಕೊಹ್ಲಿ) ಮಾತ್ರವಲ್ಲದೇ ಎಲ್ಲರೊಂದಿಗೂ ನಡೆಸಬೇಕಾದ ಸಂಭಾಷಣೆಯಾಗಿದೆ. ಸರಣಿಯಲ್ಲಿ ಉತ್ತಮವಾಗಿ ಆರಂಭಿಸಿ, ಆರಂಭದಿಂದಲೇ ಲಯ ಕಂಡುಕೊಳ್ಳಬೇಕು. ಇದು ಖಂಡಿತವಾಗಿಯೂ ಸವಾಲಾಗಿದೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ಸಾಧಾರಣವಾಗಿ ಆಡುವ ಮೂಲಕ ಆಟ ಆರಂಭಿಸಲು ಸಾಧ್ಯವಿಲ್ಲ. ಎಲ್ಲರಿಂದಲೂ ಉತ್ತಮ ಪ್ರದರ್ಶನ ಮೂಡಿಬರುವಂತಹ ವಾತಾವರಣವನ್ನು ಸೃಷ್ಟಿಸಬೇಕು' ಎಂದು ದೀಪ್‌ದಾಸ್ ಗುಪ್ತಾ ಹೇಳಿದ್ದಾರೆ.
ತಂಡದಲ್ಲಿ ಅವರ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ
ತಂಡದಲ್ಲಿನ ಅವರ ಸ್ಥಾನಗಳ ಬಗ್ಗೆ ಅವರೊಂದಿಗೆ ಯಾವುದೇ ಚರ್ಚೆಯ ಅಗತ್ಯವಿಲ್ಲ. ಯಾಕೆಂದರೆ, ನಾಲ್ಕು ವರ್ಷಗಳ ಹಿಂದೆಯೂ ಸಹ, ಪ್ರತಿ ಸರಣಿಯ ಮೊದಲು ಅವರು ತಂಡದಲ್ಲಿರುತ್ತಾರೆ ಎಂದು ಅವರಿಗೆ ನೆನಪಿಸುವ ಅಗತ್ಯವಿರಲಿಲ್ಲ. ತಮ್ಮ ಪ್ರದರ್ಶನದ ಆಧಾರದ ಮೇಲೆ ತಾವು ತಂಡದಲ್ಲಿರುತ್ತೇವೆ ಎಂಬುದು ಅವರಿಗೆ ತಿಳಿದಿತ್ತು. ಹಾಗಾದರೆ ಈಗ ಅದು ಹೇಗೆ ಬದಲಾಗುತ್ತದೆ? ಅದು ಬದಲಾಗುವುದಿಲ್ಲ ಮತ್ತು ಬದಲಾಗಬಾರದು ಎಂದು ದೀಪ್‌ದಾಸ್ ಗುಪ್ತಾ ಒತ್ತಿ ಹೇಳಿದ್ದಾರೆ.
ಕಳೆದ ವರ್ಷ ರೋಹಿತ್ ಮತ್ತು ವಿರಾಟ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದಾಗಿನಿಂದ, ಏಕದಿನ ಪಂದ್ಯಗಳಲ್ಲಿ (ODI) ಅವರ ಭವಿಷ್ಯದ ಕುರಿತು ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಪಂದ್ಯಕ್ಕೂ ಮುನ್ನ, ವಿಶ್ವಕಪ್‌ಗಾಗಿ ರೋಹಿತ್ ಅವರನ್ನು ಪರಿಗಣಿಸದೆ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡಲು ಆಯ್ಕೆ ಸಮಿತಿ ಬಯಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದಾಗ್ಯೂ, ರೋಹಿತ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ ಎಂಬ ವರದಿಗಳನ್ನು ಬಿಸಿಸಿಐನ ಉನ್ನತ ಅಧಿಕಾರಿಗಳು ನಿರಾಕರಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಒಂದು ಮಾದರಿಯನ್ನು ಮಾತ್ರ ಆಡುತ್ತಿರುವುದರಿಂದ ರೋಹಿತ್ ಮತ್ತು ಕೊಹ್ಲಿ ಅವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ದೀಪ್‌ದಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.


