ನೂರ್ ಅಹಮದ್ ಮಾರಕ ಬೌಲಿಂಗ್ ಹಾಗೂ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ಎದುರು 2 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಪ್ಲೇ ಆಫ್ ಕನಸು ಬಹುತೇಕ ಬಂದ್ ಆಗಿದೆ.

ಕೋಲ್ಕತಾ: ನೂರ್ ಅಹಮದ್ ಮಾರಕ ಬೌಲಿಂಗ್ ಹಾಗೂ ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಎದುರು 2 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಇದು ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಗಳಿಸಿದ ಮೂರನೇ ಗೆಲುವು ಎನಿಸಿಕೊಂಡರೆ, ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್‌ ಪಾಲಿಗೆ ಆರನೇ ಸೋಲು ಎನಿಸಿಕೊಂಡಿತು. ಈ ಸೋಲಿನೊಂದಿಗೆ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ಪ್ಲೇ ಆಫ್ ಕನಸು ಬಹುತೇಕ ಬಂದ್ ಆಗಿದೆ.

ಇಲ್ಲಿನ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಗೆಲ್ಲಲು 180 ರನ್‌ಗಳ ಸವಾಲಿನ ಗುರಿ ಪಡೆದ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಬ್ಯಾಟರ್‌ಗಳಾದ ಆಯುಷ್ ಮಾಥ್ರೆ ಹಾಗೂ ಡೆವೊನ್ ಕಾನ್‌ವೇ ತಲಾ ಎರಡು ಎಸೆತ ಎದುರಿಸಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೆಡ್ ನಡೆಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ರವಿಚಂದ್ರನ್ ಅಶ್ವಿನ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ರವೀಂದ್ರ ಜಡೇಜಾ ಬ್ಯಾಟಿಂಗ್ ಕೇವಲ 19 ರನ್‌ಗಳಿಗೆ ಸೀಮಿತವಾಯಿತು. ಪವರ್‌ ಪ್ಲೇನೊಳಗೆ ಚೆನ್ನೈ ಸೂಪರ್ ಕಿಂಗ್ಸ್‌ 60 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು.

ಈ ವೇಳೆ ಆರನೇ ವಿಕೆಟ್‌ಗೆ ಜತೆಯಾದ ಡೆವಾಲ್ಡ್ ಬ್ರೆವಿಸ್ ಹಾಗೂ ಶಿವಂ ದುಬೆ ಆಕರ್ಷಕ 67 ರನ್‌ಗಳ ಅಮೂಲ್ಯ ಜತೆಯಾಟವಾಡುವ ಮೂಲಕ ಚೆನ್ನೈ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್‌ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೂನಿಯರ್ ಎಬಿಡಿ ಖ್ಯಾತಿಯ ಬ್ರೆವಿಸ್, ಕೇವಲ 25 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 52 ರನ್ ಸಿಡಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಶಿವಂ ದುಬೆ 40 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಮೂಲ್ಯ 45 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕ ಎಂ ಎಸ್ ಧೋನಿ 18 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಸಹಿತ ಅಜೇಯ 17 ರನ್ ಸಿಡಿಸಿ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸಿದರು.

ಇನ್ನು ಇದಕ್ಕೂ ಮೊದಲು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ(48), ಮನೀಶ್ ಪಾಂಡೆ(36*) ಹಾಗೂ ಆಂಡ್ರೆ ರಸೆಲ್(38) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿತು.

ಕೆಕೆಆರ್ ಪ್ಲೇ ಆಫ್ ಕನಸು ಮತ್ತಷ್ಟು ಕಠಿಣ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ ಸಿಎಸ್‌ಕೆ ಎದುರಿನ ಪಂದ್ಯವು ಒಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಆದರೆ ಕೆಕೆಆರ್ ತಂಡವು ಸೋಲು ಕಾಣುವ ಮೂಲಕ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. ಕೆಕೆಆರ್ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳು ಆಡುವುದು ಬಾಕಿ ಉಳಿದಿದೆ. ಸದ್ಯ ಕೆಕೆಆರ್ ಬಳಿ 11 ಅಂಕಗಳಿದ್ದು, ಇನ್ನುಳಿದ ಎರಡೂ ಪಂದ್ಯ ಗೆದ್ದರೂ ಗರಿಷ್ಠ 15 ಅಂಕಗಳಾಗಲಿವೆ. ಕೆಕೆಆರ್ ಇನ್ನುಳಿದ ಎರಡು ಪಂದ್ಯ ಗೆದ್ದು, ಅದೃಷ್ಟ ಕೈಹಿಡಿದರಷ್ಟೇ ಪ್ಲೇ ಆಫ್‌ಗೇರಲು ಸಾಧ್ಯವಾಗಲಿದೆ. ಕೆಕೆಆರ್ ತಂಡದ ಇನ್ನೊಂದು ಸೋಲು ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬೀಳುವಂತೆ ಮಾಡಲಿದೆ.