ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಎಬಿಡಿಗೆ ಬಾಗಿಲು ತೆರೆದಿದೆ: ಮಾರ್ಕ್ ಬೌಷರ್
ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಎಬಿ ಡಿವಿಲಿಯರ್ಸ್‌ಗೆ ಬಾಗಿಲು ತೆರೆದಿದೆ ಎಂದು ಕೋಚ್ ಮಾರ್ಕ್ ಬೌಷರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಜೊಹಾನ್ಸ್‌ಬರ್ಗ್(ಏ.16): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳುವ ಸುಳಿವನ್ನು ಕೋಚ್ ಮಾರ್ಕ್ ಬೌಷರ್ ನೀಡಿದ್ದಾರೆ. ಕಳೆದ ವರ್ಷದಲ್ಲೂ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಚರ್ಚೆಗಳು ನಡೆದಿದ್ದವು, ಇದೀಗ ಮತ್ತೆ ಹರಿಣಗಳ ಕೋಚ್ ಬೌಷರ್ ಈ ಬಗ್ಗೆ ತುಟಿಬಿಚ್ಚಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿಡಿ ಜತೆ ಚರ್ಚೆ ನಡೆಸಿರುವುದಾಗಿ ದಕ್ಷಿಣ ಆಫ್ರಿಕಾ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೌಷರ್ ತಿಳಿಸಿದ್ದಾರೆ. ನಾನು ಐಪಿಎಲ್ ಆರಂಭಕ್ಕೆ ಮುನ್ನವೇ ಎಬಿ ಡಿವಿಲಿಯರ್ಸ್ ಜತೆ ಮಾತುಕತೆ ನಡೆಸಿದ್ದೇನೆ. ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಈ ಮೂಲಕ ತಮ್ಮಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎನ್ನುವುದು ಸಾಬೀತುಪಡಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎಬಿಡಿ ಎಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಬೌಷರ್ ಹೇಳಿದ್ದಾರೆ.
37 ವರ್ಷದ ಎಬಿ ಡಿವಿಲಿಯರ್ಸ್ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಆಕರ್ಷಕ 48 ರನ್ ಬಾರಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬರೋಬ್ಬರಿ 5 ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಎಬಿಡಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಯೇ ಅನಾಯಾಸವಾಗಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ.
ಎಬಿಡಿ ಸದ್ಯದಲ್ಲೇ ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳುವ ಸುಳಿವು ನೀಡಿದ ಕೋಚ್..!
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ. 2018ರಲ್ಲಿ ಅನಿರೀಕ್ಷಿತವಾಗಿ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು.