ಬೆಂಗಳೂರು(ಮಾ.01): ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಗುವಿನ ವಾತಾವರಣದಿಂದ 2019ರ ವಿಶ್ವಕಪ್ ಪಂದ್ಯದ  ಮೇಲೂ ಕಾರ್ಮೋಡ ಆವರಿಸಿದೆ. ಈ ದಿನ(ಮಾ.01) ಭಾರತೀಯರಿಗೆ ಸಂಭ್ರಮಿಸಲು ಹಲವು ಕಾರಣಗಳಿವೆ. ಒಂದೆಡೆ ಪಾಕ್ ಯುದ್ದವಿಮಾನ ಹಿಮ್ಮೆಟ್ಟಿಸುವ ವೇಳೆ ಪಾಕಿಸ್ತಾನದಲ್ಲಿ ಸೆರೆ ಸಿಕ್ಕ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳುತ್ತಿದ್ದರೆ, ಮತ್ತೊಂದೆಡೆ 16 ವರ್ಷಗಳ ಹಿಂದೆ ಇದೇ ದಿನ ಪಾಕಿಸ್ತಾನ ತಂಡವನ್ನ ಸೋಲಿಸಿ ಭಾರತ ಇತಿಹಾಸ ರಚಿಸಿತ್ತು.

ಇದನ್ನೂ ಓದಿ: ಕಮಾಂಡರ್ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಟೀಂ ಇಂಡಿಯಾ ಕ್ರಿಕೆಟಿಗರ ಪ್ರಾರ್ಥನೆ!

ಮಾರ್ಚ್ 01, 2003. ಈ ದಿನ ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿತ್ತು. ಸೆಂಚುರಿಯನ್‌ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನ ತಂಡವನ್ನ ಮಣಿಸಿ ಸಂಭ್ರಮಾಚರಣೆ ನಡೆಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 273 ರನ್ ಸಿಡಿಸಿತ್ತು. ಸಯಿದ್ ಅನ್ವರ್ 101 ರನ್ ಸಿಡಿಸಿ ಮಿಂಚಿದ್ದರು. ಜಹೀರ್ ಖಾನ್ ಹಾಗೂ ಆಶಿಶ್ ನೆಹ್ರಾ ತಲಾ 2 ವಿಕೆಟ್ ಕಬಳಿಸಿದ್ದರು. ಭಾರತ ಗೆಲುವಿಗೆ 274 ಗುರಿ ನೀಡಲಾಗಿತ್ತು.

ಇದನ್ನೂ ಓದಿ: ಅಂಬಾನಿ ಮಗನ ಮದುವೆ: ಟಿ20ಗೆ ಯುವಿ, ಭಜ್ಜಿ ಚಕ್ಕರ್‌

ಟಾರ್ಗೆಟ್ ಚೇಸ್ ಮಾಡಿದ  ಭಾರತಕ್ಕೆ ಸಚಿನ್ ತೆಂಡೂಲ್ಕರ್ ಅತ್ಯುತ್ತಮ ಆರಂಭ ನೀಡಿದರು. ವೇಗಿ ಶೋಯಿಬ್ ಅಕ್ತರ್ ಎಸೆತದಲ್ಲಿ ಸಚಿನ್ ಆಫ್ ಸೈಡ್ ಸಿಕ್ಸರ್ ಸಿಡಿಸಿದ್ದು ಪಂದ್ಯ ನೋಡಿದ ಯಾರು ಕೂಡ ಮರೆತಿಲ್ಲ. ಸಚಿನ್ 98 ರನ್ ಸಿಡಿಸಿದರೆ, ವಿರೇಂದ್ರ ಸೆಹ್ವಾಗ್ 21, ಮೊಹಮ್ಮದ್ ಕೈಫ್ 31, ರಾಹುಲ್ ದ್ರಾವಿಡ್ ಅಜೇಯ 44 ಹಾಗೂ ಯುವರಾಜ್ ಸಿಂಗ್ ಅಜೇಯ 50 ರನ್ ಸಿಡಿಸಿದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ಭಾರತ 45.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸಂಪ್ರಾದಾಯಿಕ ಎದುರಾಳಿ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ಭಾರತ, ವಿಶ್ವಕಪ್ ಹೋರಾಟದಲ್ಲಿ ಪಾಕಿಸ್ತಾನ ವಿರುದ್ದ ಅಜೇಯ ಓಟ ಮುಂದುವರಿಸಿತು. ಕೇವಲ 2 ರನ್‌ಗಳಿಂದ ಶತಕ ವಂಚಿತರಾದ ಸಚಿನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.