Asianet Suvarna News Asianet Suvarna News

IND vs SA ಡಿಕೆ, ಎಕೆ ಆಟ ಸೂಪರ್, ಭಾರತ ಜಯದ ದರ್ಬಾರ್!

ಬ್ಯಾಟಿಂಗ್‌ನಲ್ಲಿ ದಿನೇಶ್ ಕಾರ್ತಿಕ್ (ಡಿಕೆ) ಹಾಗೂ ಬೌಲಿಂಗ್‌ನಲ್ಲಿ ಆವೇಶ್ ಖಾನ್ (ಎಕೆ) ಭರ್ಜರಿ ನಿರ್ವಹಣೆ ತೋರಿದ್ದರಿಂದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ವಿಜಯ ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯ ವಿಜೇತರ ನಿರ್ಧಾರ ಬೆಂಗಳೂರಿನಲ್ಲಿ ಆಗಲಿದೆ. 

Cricket News Dinesh Karthik and Avesh Khan Shines Team India Beat South Africa in 4th T20I san
Author
Bengaluru, First Published Jun 17, 2022, 10:24 PM IST | Last Updated Jun 17, 2022, 10:59 PM IST

ರಾಜ್ ಕೋಟ್ (ಜೂನ್ 17): ಕೇವಲ 27 ಎಸೆತಗಳಲ್ಲಿ 55 ರನ್ ಬಾರಿಸಿದ ದಿನೇಶ್ ಕಾರ್ತಿಕ್ (Dinesh Karthik)  ಹಾಗೂ ಅಮೂಲ್ಯ ನಾಲ್ಕು ವಿಕೆಟ್ ಉರುಳಿಸಿದ ಆವೇಶ್ ಖಾನ್ (Avesh Khan) ಬೌಲಿಂಗ್ ಸಾಹಸದ ನೆರವಿನಿಂದ ಟೀಮ್ ಇಂಡಿಯಾ (Team India) ಪ್ರವಾಸಿ ದಕ್ಷಿಣ ಆಫ್ರಿಕಾ (South Africa) ತಂಡವನ್ನು ನಾಲ್ಕನೇ ಟಿ20 ಪಂದ್ಯದಲ್ಲಿ 82 ರನ್‌ಗಳಿಂದ ಸೋಲಿಸಿದೆ. ಅದರೊಂದಿಗೆ ಐದು ಪಂದ್ಯಗಳ ಸರಣಿ 2-2 ರಿಂದ ಸಮಬಲ ಕಂಡಿದ್ದು, ಭಾನುವಾರ ಬೆಂಗಳೂರಿನಲ್ಲಿ(Bengaluru) ಸರಣಿ ನಿರ್ಧಾರವಾಗಲಿದೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ದಿನೇಶ್ ಕಾರ್ತಿಕ್ ಅದ್ಭುತ ಅರ್ಧಶತಕ, ಹಾರ್ದಿಕ್ ಪಾಂಡ್ಯ (46ರನ್, 31 ಎಸೆತ, 3 ಬೌಂಡರಿ, 3 ಸಿಕ್ಸರ್) ಭರ್ಜರಿ ಆಟದ ನೆರವಿನಿಂದ 6 ವಿಕೆಟ್‌ಗೆ 169 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.

ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, ಆವೇಶ್ ಖಾನ್ (18ಕ್ಕೆ 4) ಅವರ ಆವೇಶದ ಬೌಲಿಂಗ್‌ ಗೆ ಆಘಾತ ಕಂಡಿದ್ದರಿಂದ 16.5 ಓವರ್‌ಗಳಲ್ಲಿ 87 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. 5 ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದ್ದರೆ, ನಂತರದ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. 

ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆದರೆ, ತನ್ನ ಕನಿಷ್ಠ ಮೊತ್ತ ದಾಖಲಿಸಲಿದೆ ಎನ್ನುವ ನಿರೀಕ್ಷೆ ಇದ್ದಿರಲಿಲ್ಲ. ಅನುಭವಿ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ಟೆಂಬಾ ಬವುಮಾ ಜೋಡಿ ಮೊದಲ ವಿಕೆಟ್ ಗೆ 20 ರನ್ ಜೊತೆಯಾಟವಾಡಿತ್ತು. ಈ ವೇಳೆ ನಾಯಕ ಟೆಂಬಾ ಬುವುಮಾ ಗಾಯಾಳುವಾಗಿ ಹೊರನಡೆದರು. ಈ ಮೊತ್ತಕ್ಕೆ ನಾಲ್ಕು ರನ್ ಸೇರಿಸುವ ವೇಳೆಗೆ ಕ್ವಿಂಟನ್ ಡಿ ಕಾಕ್ ರನೌಟ್ ಆಗಿದ್ದರಿಂದ ದಕ್ಷಿಣ ಆಫ್ರಿಕಾ ಆಘಾತ ಕಂಡಿತ್ತು.

ನಂತರ ಬಂದ ಡ್ವೈನ್ ಪ್ರಿಟೋರಿಯಸ್ ಆರು ಎಸೆತಗಳನ್ನು ಎದುರಿಸಿ ಶೂನ್ಯ ರನ್ ಗೆ ಆವೇಶ್ ಖಾನ್‌ಗೆ (Avesh Khan) ಮೊದಲ ಬಲಿಯಾದರು. ರಸ್ಸಿ ವಾನ್ ಡರ್ ಡುಸೆನ್ (20 ರನ್, 20 ಎಸೆತ, 2 ಬೌಂಡರಿ) ಹಾಗೂ ಹ್ರೆನಿಚ್ ಕ್ಲಾಸೆನ್ (8) 4ನೇ ವಿಕೆಟ್ ಗೆ 19 ರನ್ ಜೊತೆಯಾಟವಾಡಿ ಚೇತರಿಕೆ ನೀಡುವ ಪ್ರಯತ್ನ ಮಾಡುತ್ತಿದ್ದ ವೇಳೆ, ದಾಳಿಗಿಳಿದ ಚಾಹಲ್ ಕ್ಲಾಸೆನ್ ಅವರ ವಿಕೆಟ್ ಪಡೆದರು. ಅಪಾಯಕಾರಿ ಡೇವಿಡ್ ಮಿಲ್ಲರ್ ವಿಕೆಟ್‌ಅನ್ನು ಹರ್ಷಲ್ ಪಟೇಲ್ (Harshal Patel) ಉರುಳಿಸಿದಾಗ ಭಾರತದ ಗೆಲುವು ಖಚಿತಗೊಂಡಿತು.

ತಂಡದ ಗೆಲುವಿಗೆ ಅಡ್ಡಿಯಾಗಿ ನಿಂತಿದ್ದ ರಸ್ಸಿ ವಾನ್ ಡರ್ ಡುಸೆನ್‌ ರನ್ನು ಔಟ್ ಮಾಡುವ ಮೂಲಕ 2ನೇ ವಿಕೆಟ್ ಪಡೆದ ಆವೇಶ್ ಖಾನ್, ಬಳಿಕ ಮಾರ್ಕೋ ಜಾನ್ಸೆನ್ ಹಾಗೂ ಕೇಶವ್ ಮಹರಾಜ್ ವಿಕೆಟ್‌ ಉರುಳಿಸಿ ನಾಲ್ಕು ವಿಕೆಟ್ ಸಾಧನೆ ಮಾಡಿದರು. ಕೊನೆಯಲ್ಲಿ ಆನ್ರಿಚ್‌ ನೋಕಿಯೆ ಹಾಗೂ ಲುಂಜಿ ಎನ್‌ಗಿಡಿ ವಿಕೆಟ್ ಅನ್ನು ಕ್ರಮವಾಗಿ ಚಾಹಲ್ ಹಾಗೂ ಅಕ್ಸರ್ ಪಟೇಲ್ ಉರುಳಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 498 ರನ್ ಪೇರಿಸಿದ ಇಂಗ್ಲೆಂಡ್!

ಹಲವು ದಾಖಲೆ ಕಂಡ ಪಂದ್ಯ: ದಕ್ಷಿಣ ಆಫ್ರಿಕಾ ತಂಡವನ್ನು 82 ರನ್‌ಗಳಿಂದ ಮಣಿಸಿದ ಭಾರತ, ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಈವರೆಗಿನ ಅತೀ ದೊಡ್ಡ ಗೆಲುವು ಕಂಡಿತು. ಇದಕ್ಕೂ ಮುನ್ನ ಇದೇ ಸರಣಿಯ ಕಳೆದ ಪಂದ್ಯದಲ್ಲಿ 48 ರನ್ ಗಳಿಂದ ಗೆದ್ದಿದ್ದೇ ದೊಡ್ಡ ಅಂತರದ ಗೆಲುವು ಎನಿಸಿತ್ತು. 2007ರಲ್ಲಿ ಡರ್ಬನ್ ನಲ್ಲಿ ನಡೆದ ಪಂದ್ಯದಲ್ಲಿ 37 ರನ್‌ಗಳಿಂದ ಗೆದ್ದಿತ್ತು.

Tim Paine: ನಾಲ್ಕರಿಂದ ಐದು ಮಂದಿಯಿಂದ ಇಡೀ ಟೆಸ್ಟ್‌ ಸರಣಿ ಅಪಾಯಕ್ಕೊಳಗಾಗುತ್ತಿತ್ತು..!

ದಕ್ಷಿಣ ಆಫ್ರಿಕಾದ ಕನಿಷ್ಠ ಮೊತ್ತ: ಟಿ20ಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಕನಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 89 ರನ್‌ಗೆ ಆಲೌಟ್ ಆಗಿದ್ದು ಹಿಂದಿನ ಕನಿಷ್ಠ ಮೊತ್ತ ಎನಿಸಿತ್ತು. 

 

Latest Videos
Follow Us:
Download App:
  • android
  • ios