ಬೆಂಗಳೂರು(ಮಾ.08): ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮತ್ತೊಂದು ಶತಕ ಚಚ್ಚಿದ್ದಾರೆ. ಕೇರಳ ವಿರುದ್ದದ ಅಂತಿಮ ಎಂಟರಘಟ್ಟದ ಪಂದ್ಯದಲ್ಲಿ ದೇವದತ್ ಪಡಿಕ್ಕಲ್‌ ಆಕರ್ಷಕ 101 ರನ್‌ ಚಚ್ಚುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ 4 ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಆಡಿದ ಎಲ್ಲಾ ಪಂದ್ಯಗಳಲ್ಲೂ 50+ ರನ್‌ ಬಾರಿಸಿದ ಸಾಧನೆ ಮಾಡಿದ್ದಾರೆ. ಉತ್ತರ ಪ್ರದೇಶ ವಿರುದ್ದ ಮೊದಲ ಪಂದ್ಯದಲ್ಲಿ 52 ರನ್ ಬಾರಿಸಿದ್ದ ಎಡಗೈ ಬ್ಯಾಟ್ಸ್‌ಮನ್‌ ಪಡಿಕ್ಕಲ್‌, ಎರಡನೇ ಪಂದ್ಯದಲ್ಲಿ ಕೇವಲ 3 ರನ್‌ ಅಂತರದಲ್ಲಿ ಶತಕವಂಚಿತರಾಗಿದ್ದರು. ಅದಾದ ಬಳಿಕ ಒಡಿಶಾ(152), ಕೇರಳ(126), ರೈಲ್ವೇಸ್‌ ವಿರುದ್ದ ಅಜೇಯ 145 ರನ್‌ ಬಾರಿಸಿದ್ದ ಪಡಿಕ್ಕಲ್‌ ಇದೀಗ ಮತ್ತೆ ಕೇರಳ ವಿರುದ್ದ ಮತ್ತೊಂದು ಮೂರಂಕಿ ಮೊತ್ತ ದಾಖಲಿಸಿದ್ದಾರೆ.

ವಿಜಯ್‌ ಹಜಾರೆ ಟ್ರೋಫಿ: ಪಡಿಕ್ಕಲ್‌-ಸಮರ್ಥ್‌ ಕೆಚ್ಚೆದೆಯ ಶತಕ, ಕೇರಳಕ್ಕೆ ಕಠಿಣ ಗುರಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಚೊಚ್ಚಲ ಆವೃತ್ತಿಯಲ್ಲೇ 15 ಪಂದ್ಯಗಳನ್ನಾಡಿ 473 ರನ್‌ ಬಾರಿಸುವ ಮೂಲಕ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದ ಪಡಿಕ್ಕಲ್‌, ಕಳೆದೆರಡು ವರ್ಷಗಳಿಂದಲೂ ದೇಸಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ. ಸದ್ಯ ನಡೆಯುತ್ತಿರುವ ವಿಜಯ್‌ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್ ಕೇವಲ 6 ಪಂದ್ಯಗಳಿಂದ 168.25ರ ಸರಾಸರಿಯಲ್ಲಿ 673 ರನ್‌ ಚಚ್ಚಿದ್ದಾರೆ. ಪಡಿಕ್ಕಲ್‌ ಅದ್ಭುತ ಪ್ರದರ್ಶನಕ್ಕೆ ಮನಸೋತ ಕ್ರಿಕೆಟ್‌ ಅಭಿಮಾನಿಗಳು ಆದಷ್ಟು ಬೇಗ ದೇವದತ್ ಪಡಿಕ್ಕಲ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಿ ಎನ್ನುವ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.