ಡೆಲ್ಲಿ(ಮಾ.08): ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್ ಬಾರಿಸಿದ ಸತತ 4ನೇ ಶತಕ ಹಾಗೂ ನಾಯಕ ರವಿಕುಮಾರ್ ಸಮರ್ಥ್‌ ಬಾರಿಸಿದ ವಿಜಯ್ ಹಜಾರೆ ಟೂರ್ನಿಯ ಮೂರನೇ ಶತಕದ ನೆರವಿನಿಂದ ಕ್ವಾರ್ಟರ್‌ ಫೈನಲ್‌ನಲ್ಲಿ ಕೇರಳ ವಿರುದ್ದ ಕರ್ನಾಟಕ ಕೇವಲ 3 ವಿಕೆಟ್ ಕಳೆದುಕೊಂಡು 338 ರನ್‌ ಕಲೆಹಾಕಿದ್ದು, ಕೇರಳಕ್ಕೆ ಕಠಿಣ ಗುರಿ ನೀಡಿದೆ.

ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ದಿಟ್ಟ ಆರಂಭವನ್ನೇ ಪಡೆಯಿತು. ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕರ್ನಾಟಕ ಆರಂಭಿಕ ಜೋಡಿ ಪಡಿಕ್ಕಲ್‌ ಹಾಗೂ ಸಮರ್ಥ್‌ ಮತ್ತೊಂದು ಅದ್ಭುತ ಜತೆಯಾಟ ನಿಭಾಯಿಸಿದರು. ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಸತತ 4 ಶತಕ ಬಾರಿಸಿದ ಭಾರತದ ಮೊದಲ ಹಾಗೂ ಒಟ್ಟಾರೆ ನಾಲ್ಕನೇ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ಪಡಿಕ್ಕಲ್‌ ಭಾಜನರಾಗಿದ್ದಾರೆ. ಈ ಮೊದಲು ಕುಮಾರ ಸಂಗಕ್ಕರ, ಅಲ್ವಿರೋ ಪೀಟರ್‌ಸನ್‌, ಕುರ್ರಮ್ ಮಂಜೂರ್‌ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಸತತ 4 ಶತಕ ಬಾರಿಸಿದ್ದರು. ಪ್ರಸಕ್ತ ಆವೃತ್ತಿಯ ವಿಜಯ್‌ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್‌ ಕ್ರಮವಾಗಿ 52, 97, 152, 126*, 145* ಹಾಗೂ 101 ರನ್‌ ಬಾರಿಸಿ ಅಬ್ಬರಿಸಿದ್ದಾರೆ. 

ವಿಜಯ್‌ ಹಜಾರೆ ಟ್ರೋಫಿ: ಕರ್ನಾಟಕ ಎದುರು ಟಾಸ್ ಗೆದ್ದ ಕೇರಳ ಬೌಲಿಂಗ್‌ ಆಯ್ಕೆ

ದೇವದತ್ ಪಡಿಕ್ಕಲ್‌ ಹಾಗೂ ಆರ್‌. ಸಮರ್ಥ್ ಕೇರಳ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ 42.4 ಓವರ್‌ಗಳಲ್ಲಿ 249 ರನ್‌ಗಳ ಜತೆಯಾಟ ನಿಭಾಯಿಸಿತು. ಪಡಿಕ್ಕಲ್‌ 119 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ಬಾಸಿಲ್‌ಗೆ ವಿಕೆಟ್‌ ಒಪ್ಪಿಸಿದರು.

ಇನ್ನು ನಾಯಕ ರವಿಕುಮಾರ್ ಕೇವಲ 8 ರನ್‌ ಅಂತರದಲ್ಲಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು. 158 ಎಸೆತಗಳನ್ನು ಎದುರಿಸಿದ ಸಮರ್ಥ್‌ 22 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 192 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಮನೀಶ್ ಪಾಂಡೆ ಕೇವಲ 20 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ ಅಜೇಯ 34 ರನ್‌ಗಳಿಸಿದರು.