ಐಪಿಎಲ್ 2025ರಲ್ಲಿ ಆರ್‌ಸಿಬಿ ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಇದರಿಂದಾಗಿ ನೆಟ್ಟಿಗರು ಚಿನ್ನಸ್ವಾಮಿ ಸ್ಟೇಡಿಯಂ ಅಗೆಯಲು ಆಗ್ರಹಿಸಿದ್ದಾರೆ. ಆರ್‌ಸಿಬಿ ತವರಿನಾಚೆ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ತವರಿನಲ್ಲೇ ಸೋಲುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಈಗಾಗಲೇ ಮೊದಲಾರ್ಧದ ಪಂದ್ಯಾವಳಿಗಳು ಮುಕ್ತಾಯವಾಗಿದ್ದು, ಪ್ಲೇ ಆಫ್ ಪ್ರವೇಶಿಸಲು ಎಲ್ಲಾ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆ ಶುರುವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಅಗೆಯಲು ಆಗ್ರಹ ಕೇಳಿಬಂದಿದೆ.
ಹೌದು, ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಇದುವರೆಗೂ 7 ಪಂದ್ಯಗಳನ್ನಾಡಿದ್ದು, 4 ಗೆಲುವು ಹಾಗೂ ಮೂರು ಸೋಲು ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಪೈಕಿ ಆರ್‌ಸಿಬಿ ತಂಡವು ತವರಿನಾಚೆ ತಾನಾಡಿದ ನಾಲ್ಕು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿದೆ. ಆದರೆ ತವರಿನಲ್ಲೇ ನಡೆದ ಮೂರು ಪಂದ್ಯಗಳಲ್ಲೂ ಆರ್‌ಸಿಬಿ ಹ್ಯಾಟ್ರಿಕ್ ಸೋಲು ಅನುಭವಿಸಿವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಖ್ಯಾತ ಕ್ರಿಕೆಟಿಗರು ನನಗೆ ನಗ್ನ ಚಿತ್ರ ಕಳುಹಿಸುತ್ತಿದ್ರು! ಸಂಜಯ್ ಬಾಂಗರ್ ಪುತ್ರಿ ಗಂಭೀರ ಆರೋಪ
ಈ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್ ಅಂತರದಿಂದ ಮಣಿಸುವ ಮೂಲಕ ಶುಭಾರಂಭ ಮಾಡಿತ್ತು. ಇದಾದ ಬಳಿಕ ಚೆನ್ನೈನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್ ಅಂತರದಲ್ಲಿ ಮಣಿಸಿ ಬೀಗಿತ್ತು. ಇದಾದ ನಂತರ ತವರಿನಲ್ಲಿ ಗುಜರಾತ್ ಟೈಟಾನ್ಸ್ ಎದುರು ಆರ್‌ಸಿಬಿ ಮೊದಲ ಸೋಲಿನ ಕಹಿಯುಂಡಿತ್ತು. ಇನ್ನು ಇದಾದ ಬಳಿಕ ಮುಂಬೈನ ವಾಂಖೆಡೆ ಮೈದಾನದಲ್ಲಿ ಆರ್‌ಸಿಬಿ ತಂಡವು 12 ರನ್ ರೋಚಕ ಜಯ ಸಾಧಿಸಿತ್ತು. ಮತ್ತೆ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ 6 ವಿಕೆಟ್ ಅಂತರದ ಸೋಲು ಅನುಭವಿಸಿತ್ತು. ಇನ್ನು ಮತ್ತೆ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 9 ವಿಕೆಟ್ ಅಂತರದ ಗೆಲುವು ಸಾಧಿಸಿದ್ದ ಆರ್‌ಸಿಬಿ, ಇದೀಗ ತವರಿನಲ್ಲಿ ಪಂಜಾಬ್ ಕಿಂಗ್ಸ್ ಎದುರು 5 ವಿಕೆಟ್ ಅಂತರದ ಸೋಲು ಅನುಭವಿಸಿದೆ.
ಕೈಕೊಟ್ಟ ಬೆಂಗಳೂರು ಬ್ಯಾಟರ್ಸ್ ತವರಿನಲ್ಲಿ ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು!
ತವರಿನಲ್ಲಿ ಹ್ಯಾಟ್ರಿಕ್ ಸೋಲು, ನೆಟ್ಟಿಗರ ಆಕ್ರೋಶ:
ಆರ್‌ಸಿಬಿ ತವರಿನಾಚೆ ಅದ್ಭುತ ಪ್ರದರ್ಶನದ ಮೂಲಕ ಗೆಲುವು ದಾಖಲಿಸುತ್ತಿದೆಯಾದರೂ, ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ನೆಟ್ಟಿಗರು ನಮ್ಮ ಬೆಂಗಳೂರು ತಂಡಕ್ಕೆ ದೃಷ್ಟಿಯಾಗಿದೆ ಎಂದು ಸ್ಟೇಡಿಯಂ ಎಂಟ್ರಿಗೇಟ್‌ಗೆ ನಿಂಬು-ಮೆಣಸಿನ ಕಾಯಿ ಹಾರ ಕಟ್ಟಿದ್ದಾರೆ. ಇನ್ನು ಕೆಲವರು ಬೇರೆ ಮೀಮ್ಸ್ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂ ಕಾಲೆಳೆಯುತ್ತಿದ್ದಾರೆ.
ಇನ್ನೋರ್ವ ನೆಟ್ಟಿಗ ಇದಕ್ಕಿಂತ ಮುಂದೆ ಹೋಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಕೆಳಗೆ ಪುರಾತನ ದೇವಾಲಯವಿದ್ದು, ಭಾರತದ ಪುರಾತತ್ವ ಇಲಾಖೆ ಇಲ್ಲಿ ಉತ್ಖನನ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಾಚೆಗೆ ಐಪಿಎಲ್ ನಡೆದರೆ ಆರ್‌ಸಿಬಿ ಗೆಲ್ಲುತ್ತೆ ಎನ್ನುವುದು ಈ ನೆಟ್ಟಿಗನ ಮುಂದಾಲೋಚನೆಯಾಗಿದೆ. ಒಟ್ಟಿನಲ್ಲಿ ಆರ್‌ಸಿಬಿ ತಂಡದ ತವರಿನ ಪ್ರದರ್ಶನವು ನೆಟ್ಟಿಗರು ಕ್ರಿಯೇಟಿವಿಟಿಯನ್ನು ಹೊರತರುವಂತೆ ಮಾಡಿದ್ದಂತೂ ಸುಳ್ಳಲ್ಲ.
ಇದೀಗ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಪ್ರಿಲ್ 20ರಂದು ಚಂಡೀಘಡದ ಮುಲ್ಲಾನ್‌ಪುರ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ತವರಿನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ತಂಡವು ಎದುರು ನೋಡುತ್ತಿದೆ. ಇದರ ಜತೆಗೆ ತವರಿನಾಚೆಗಿನ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿಕೊಂಡು ಹೋಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನಸು ಕಾಣುತ್ತಿದೆ.
