* 15ನೇ ಆವೃತ್ತಿಯ ಐಪಿಎಲ್ ಪ್ಲೇ ಆಫ್‌ ಪಂದ್ಯಗಳಿಗೆ ಕ್ಷಣಗಣನೆ* ಮೇ 24ರಿಂದ ಪ್ಲೇ ಆಫ್ ಪಂದ್ಯಗಳು ಆರಂಭ, ಪ್ಲೇ ಆಫ್ಸ್‌ಗೆ ಮಳೆ ಭೀತಿ* ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಏನಾಗಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ 

ಬೆಂಗಳೂರು(ಮೇ.23): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಾವಳಿಗಳು ಮುಕ್ತಾಯವಾಗಿದ್ದು, ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್‌, ಲಖನೌ ಸೂಪರ್ ಜೈಂಟ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೇಲೆ ಮಳೆರಾಯ ವಕ್ರದೃಷ್ಠಿ ಬೀರುವ ಸಾಧ್ಯತೆಯಿದ್ದು, ಒಂದು ವೇಳೆ ಮಳೆಯಿಂದ ಪ್ಲೇ ಆಫ್‌ ರದ್ದಾದರೆ ಆರ್‌ಸಿಬಿ ತಂಡಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ಹೌದು, ಐಪಿಎಲ್‌ ಟೂರ್ನಿಯ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನ ಹಾಗೂ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಆತಿಥ್ಯವನ್ನು ವಹಿಸಲಿದೆ. ಏಪ್ರಿಲ್ 24ರಂದು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಸೆಣಸಾಟ ನಡೆಸಿದರೆ, ಮರುದಿನ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಕ್ವಾಲಿಫೈಯರ್‌ ಪಂದ್ಯಗಳು ರದ್ದಾದರೆ ಯಾವುದೇ ಮೀಸಲು ದಿನವನ್ನು ನಿಗದಿ ಮಾಡಿಲ್ಲ, ಆದರೆ ಮೇ 29ರಂದು ಫೈನಲ್‌ ಪಂದ್ಯ ನಿಗದಿಯಾಗಿದ್ದು, ಒಂದು ವೇಳೆ ಆ ದಿನ ಪಂದ್ಯ ನಡೆಯದೇ ಹೋದರೆ ಮರುದಿನ ಮೀಸಲು ದಿನವಾದ ಅಂದರೆ ಮೇ 30ರಂದು ಫೈನಲ್‌ ಪಂದ್ಯ ಜರುಗಲಿದೆ.

15ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ಪಂದ್ಯಗಳಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮೇ 24, 25ಕ್ಕೆ ಕ್ರಮವಾಗಿ ಪ್ಲೇ-ಆಫ್‌ನ ಕ್ವಾಲಿಫಯರ್‌-1, ಎಲಿಮಿನೇಟರ್‌ ಪಂದ್ಯಗಳು ನಿಗದಿಯಾಗಿವೆ. ಆದರೆ ನಗರದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸಿಡಿಲು ಬಡಿತದಿಂದ ಕ್ರೀಡಾಂಗಣದ ಗ್ಯಾಲರಿಯ ಗ್ಲಾಸ್‌ ಕೂಡಾ ಒಡೆದು ಹೋಗಿದೆ. ಮುಂದಿನ 3 ದಿನ ಮಳೆಯಾಗುವ ಮುನ್ಸೂಚನೆ ಇದೆ. 

ಒಂದು ವೇಳೆ ಫೈನಲ್‌ ಸೇರಿದಂತೆ ನಾಲ್ಕೂ ಪಂದ್ಯಗಳಲ್ಲೂ ಮಳೆ ಸೇರಿದಂತೆ ನಿಗದಿತ ಸಮಯದಲ್ಲಿ ಪಂದ್ಯವನ್ನು ಮುಗಿಸಲು ಸಾಧ್ಯವಾಗದೇ ಹೋದರೆ ಸೂಪರ್ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲು ಐಪಿಎಲ್ ಆಡಳಿತ ಮಂಡಳಿಯು ತೀರ್ಮಾನಿಸಿದೆ. ಇನ್ನು ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ಪಂದ್ಯಗಳು ಒಂದೂ ಎಸೆತ ಕಾಣದೇ ರದ್ದಾದರೇ, ಲೀಗ್ ಹಂತದಲ್ಲಿ ಗರಿಷ್ಠ ಅಂಕಗಳನ್ನು ಕಲೆಹಾಕಿದ ತಂಡವನ್ನು ಮುಂದಿನ ಹಂತ ಪ್ರವೇಶಿಸಲು ಅರ್ಹತೆಗಿಟ್ಟಿಸಿಕೊಳ್ಳಲಿವೆ. 

ಲೀಗ್ ಹಂತ ಮುಕ್ತಾಯದ ವೇಳೆಗೆ ಸದ್ಯ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು 14 ಪಂದ್ಯಗಳನ್ನಾಡಿ 10 ಗೆಲುವುಗಳನ್ನು ದಾಖಲಿಸುವ ಮೂಲಕ 20 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ ರಾಯಲ್ಸ್‌ ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಲಾ 9 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ. ಎರಡೂ ತಂಡಗಳು ಸಮಾನ ಅಂಕ ಪಡೆದಿದ್ದರೂ ಸಹಾ ನೆಟ್‌ ರನ್‌ರೇಟ್ ಉತ್ತಮವಾಗಿರುವ ಕಾರಣ ರಾಜಸ್ಥಾನ ರಾಯಲ್ಸ್‌ ಎರಡನೇ ಸ್ಥಾನ ಪಡೆದಿದ್ದು, ಲಖನೌ ಮೂರನೇ ಸ್ಥಾನದಲ್ಲಿದೆ. ಇನ್ನು ಟೂರ್ನಿಯಲ್ಲಿ ಎಂಟು ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಇದೀಗ ಐಪಿಎಲ್‌ ರೂಲ್ಸ್‌ನಂತೆ ಮಳೆಯಿಂದ ಮೊದಲ ಕ್ವಾಲಿಫಯರ್‌ ಪಂದ್ಯವು ರದ್ದಾದರೆ ರಾಜಸ್ಥಾನ ರಾಯಲ್ಸ್ ತಂಡವನ್ನು ಹಿಂದಿಕ್ಕಿ ಗುಜರಾತ್‌ ಟೈಟಾನ್ಸ್‌ ಫೈನಲ್‌ ಪ್ರವೇಶಿಸಲಿದೆ. ಇನ್ನು ಎಲಿಮಿನೇಟರ್ ಪಂದ್ಯವು ಒಂದೂ ಎಸೆತ ಕಾಣದೇ ರದ್ದಾದರೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ರೇಸ್‌ನಿಂದ ಹೊರಬೀಳಲಿದ್ದು, ಲಖನೌ ಸೂಪರ್ ಜೈಂಟ್ಸ್‌ ತಂಡವು ಎರಡನೇ ಕ್ವಾಲಿಫೈಯರ್ ಹಂತಕ್ಕೆ ಲಗ್ಗೆಯಿಡಲಿದೆ.

IPL 2022: ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಸಂಭ್ರಮಾಚರಣೆ..! ವಿಡಿಯೋ ವೈರಲ್

ಐಪಿಎಲ್ ಫೈನಲ್ ಪಂದ್ಯವು 7.30ರ ಬದಲಾಗಿ ಸಂಜೆ 8.00 ಗಂಟೆಗೆ ಆರಂಭವಾಗಲಿದೆ. ಇನ್ನು ಕ್ವಾಲಿಫೈಯರ್ ಪಂದ್ಯಗಳು ಸಂಜೆ 7.30ರಿಂದ ಆರಂಭವಾಗಲಿವೆ. ಒಂದು ವೇಳೆ ಕ್ವಾಲಿಫೈಯರ್ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿದರೆ, ಗರಿಷ್ಠವೆಂದರೆ ರಾತ್ರಿ 9.40 (ಯಾವುದೇ ಓವರ್ ಕಡಿತವಿಲ್ಲದೇ) ರವರೆಗೂ ಪಂದ್ಯ ಆರಂಭಿಸುವ ಕುರಿತಂತೆ ಸಮಯಾವಕಾಶವನ್ನು ಇಟ್ಟುಕೊಂಡಿದೆ. ರಾತ್ರಿ 9.40ರ ನಂತರವೂ ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದಾದರೇ ಈ ಮೇಲ್ಕಂಡ ನಿಯಮವನ್ನು ಅಳವಡಿಸಲಾಗುವುದು. ಅದೇ ರೀತಿ ಫೈನಲ್ ಪಂದ್ಯವನ್ನು ಗರಿಷ್ಟ ರಾತ್ರಿ 10.10ರವರೆಗೂ (ಯಾವುದೇ ಓವರ್ ಕಡಿತವಿಲ್ಲದೇ) ಕಾದು ನೋಡಲು ತೀರ್ಮಾನಿಸಲಾಗಿದೆ. ರಾತ್ರಿ 10.10ರ ಬಳಿಕವೂ ಪಂದ್ಯ ನಡೆಸಲು ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದರೆ, ಮರುದಿನ ಫೈನಲ್‌ ಪಂದ್ಯ ನಡೆಯಲಿದೆ. 

ಇನ್ನು ಒಂದು ಇನಿಂಗ್ಸ್‌ ಮುಕ್ತಾಯವಾಗಿ, ಎರಡನೇ ಇನಿಂಗ್ಸ್‌ ನಡೆಯುವ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಡೆಕ್ವರ್ಥ್‌ ಲೂಯಿಸ್ ನಿಯಮವನ್ನು ಬಳಸಿ ಫಲಿತಾಂಶವನ್ನು ಪ್ರಕಟಿಸಲು ತೀರ್ಮಾನಿಸಲಾಗಿದೆ. ಇನ್ನು ಒಂದು ವೇಳೆ ಫೈನಲ್ ಪಂದ್ಯಕ್ಕೆ ಮೀಸಲು ದಿನದಲ್ಲೂ ಮಳೆ ಕಾಟ ಕೊಟ್ಟರೆ ಭಾನುವಾರ ರಾತ್ರಿ 1.20ಕ್ಕೆ ಸೂಪರ್‌ ಓವರ್ ಆಡಿಸಿ ಚಾಂಪಿಯನ್ ಯಾರೆಂದು ತೀರ್ಮಾನವಾಗಲಿದೆ.