Asianet Suvarna News Asianet Suvarna News

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌: ಐಸಿಸಿ ವಿರುದ್ಧ ಹರಿಹಾಯ್ದ ಕ್ರಿಕೆಟ್‌ ಅಭಿಮಾನಿಗಳು

* ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ

* ಮೊದಲ ದಿನದಾಟವನ್ನು ಬಲಿ ಪಡೆದ ವರುಣರಾಯ

* ಮಳೆ ಸೂಚನೆಯಿದ್ದರೂ ಇಂಗ್ಲೆಂಡ್‌ನಲ್ಲಿ ಫೈನಲ್ ಆಯೋಜಿಸಿದ್ದೇಕೆಂದು ಐಸಿಸಿ ಮೇಲೆ ಕಿಡಿಕಾರಿದ ಫ್ಯಾನ್ಸ್

Cricket Fans lash out at ICC on Twitter after rain washes out first day of Ind vs NZ WTC final in Southampton kvn
Author
Southampton, First Published Jun 19, 2021, 8:35 AM IST

ಸೌಥಾಂಪ್ಟನ್‌(ಜೂ.19): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟ ಒಂದೂ ಎಸೆತ ಕಾಣದೇ ಸ್ಥಗಿತವಾಗಿದೆ. ಇದೀಗ ಐಸಿಸಿ ಮೇಲೆ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.

ಹೌದು, ಇಂಗ್ಲೆಂಡ್‌ನಲ್ಲಿ ಮಳೆ ಮುನ್ಸೂಚನೆ ಇದ್ದರೂ ಪಂದ್ಯವನ್ನು ಅಲ್ಲಿಯೇ ಆಯೋಜಿಸಿದ ಐಸಿಸಿ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಹರಿಹಾಯ್ದಿದ್ದಾರೆ. ಟ್ವೀಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಮೀಮ್‌ಗಳನ್ನು ಮಾಡಿ ಐಸಿಸಿಯನ್ನು ಟೀಕಿಸಿದ್ದಾರೆ. 

‘ಸೌಥಾಂಪ್ಟನ್‌ನಲ್ಲಿ ಎಲ್ಲಾ 5 ದಿನಗಳಂದೂ ಮಳೆ ಮುನ್ಸೂಚನೆ ಇದೆ. ಈ ಸಮಯದಲ್ಲಿ ಪ್ರತಿ ವರ್ಷ ಮಳೆಯಾಗುತ್ತದೆ. ಈ ವಿಷಯ ಗೊತ್ತಿದ್ದರೂ ಐಸಿಸಿ ಏಕೆ ಪಂದ್ಯವನ್ನು ಇಂಗ್ಲೆಂಡ್‌ನಲ್ಲೇ ನಡೆಸಲು ನಿರ್ಧರಿಸಿತು ಎನ್ನುವುದೇ ಅರ್ಥವಾಗುತ್ತಿಲ್ಲ’ ಎಂದು ಅಭಿಮಾನಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇಂಗ್ಲೆಂಡ್‌ನಲ್ಲೇ ಪಂದ್ಯ ನಡೆಸಲು ನಿರ್ಧರಿಸಿದ್ದೇಕೆ?

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯನ್ನು ಐಸಿಸಿ ಎರಡೂವರೆ ವರ್ಷಗಳ ಹಿಂದೆ ಪರಿಚಯಿಸಿದಾಗಲೇ ಫೈನಲ್‌ ಪಂದ್ಯ 2021ರ ಜೂನ್‌ನಲ್ಲಿ ಕ್ರಿಕೆಟ್‌ ಕಾಶಿ ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಘೋಷಿಸಿತ್ತು. ಬಳಿಕ ಕೋವಿಡ್‌ನಿಂದಾಗಿ ಬಯೋ ಬಬಲ್‌ ನಿರ್ಮಿಸಲು ಸುಲಭವಾಗಲಿದೆ ಎನ್ನುವ ಕಾರಣಕ್ಕೆ ಸೌಥಾಂಪ್ಟನ್‌ಗೆ ಪಂದ್ಯವನ್ನು ಸ್ಥಳಾಂತರಿಸಲಾಯಿತು. ರೋಸ್‌ ಬೌಲ್‌ ಕ್ರೀಡಾಂಗಣದ ಆವರಣದಲ್ಲೇ ಪಂಚತಾರಾ ಹೋಟೆಲ್‌ ಇರುವ ಕಾರಣ ಪಂದ್ಯವನ್ನು ಸೌಥಾಂಪ್ಟನ್‌ನಲ್ಲಿ ನಡೆಸುವುದಾಗಿ ಐಸಿಸಿ ಘೋಷಿಸಿತು. ಇದಕ್ಕೆ ಬಿಸಿಸಿಐ ಸಹ ಸಮ್ಮತಿಸಿತ್ತು ಎನ್ನಲಾಗಿದೆ. ಫೈನಲ್‌ಗೇರುವ ತಂಡಗಳು ನಿರ್ಧಾರವಾಗುವ ಮೊದಲೇ ಸ್ಥಳವನ್ನು ನಿರ್ಧರಿಸಿದ್ದರ ಬಗ್ಗೆಯೂ ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; ಒಂದು ಎಸೆತ ಕಾಣದೆ ಮೊದಲ ದಿನ ರದ್ದು!

2019ರ ಏಕದಿನ ವಿಶ್ವಕಪ್‌ ವೇಳೆಯೂ ಭಾರತ-ಕಿವೀಸ್‌ ಪಂದ್ಯಕ್ಕೆ ಮಳೆ ಅಡ್ಡಿ!

2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ವೇಳೆಯೂ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಪಂದ್ಯಗಳಿಗೆ ಮಳೆ ಅಡ್ಡಿಯಾಗಿತ್ತು. ಲೀಗ್‌ ಹಂತದ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿತ್ತು. ಇನ್ನು ಸೆಮಿಫೈನಲ್‌ ಮಳೆಯಿಂದಾಗಿ 2 ದಿನ ನಡೆದಿತ್ತು.

ಮಳೆ ಮುನ್ಸೂಚನೆ ಇದ್ದರೂ ಫಲಿತಾಂಶ?

ಇಂಗ್ಲೆಂಡ್‌ನಲ್ಲಿ ಸಾಮಾನ್ಯವಾಗಿ ಜೂನ್‌-ಜುಲೈನಲ್ಲಿ ದ್ವಿಪಕ್ಷೀಯ ಸರಣಿಗಳು ನಡೆಯಲಿವೆ. ಕಳೆದ 5 ವರ್ಷದಲ್ಲಿ ಇಂಗ್ಲೆಂಡ್‌ನಲ್ಲಿ 32 ಪುರುಷರ ಟೆಸ್ಟ್‌ ಪಂದ್ಯಗಳು ನಡೆದಿದ್ದು, ಕೇವಲ 4 ಪಂದ್ಯಗಳು ಮಾತ್ರ ಡ್ರಾಗೊಂಡಿವೆ. ಮಳೆ ಅಡ್ಡಿಯಾದರೂ ಫೈನಲ್‌ ಪಂದ್ಯ ಫಲಿತಾಂಶ ನೀಡಬಹುದು ಎನ್ನುವ ನಿರೀಕ್ಷೆ ಇದೆ.

Follow Us:
Download App:
  • android
  • ios