ಮೆಲ್ಬರ್ನ್‌(ಮೇ.19): ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾಳಗ ಎಂದೇ ಬಿಂಬಿತವಾಗಿರು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪುರುಷರ ಹಾಗೂ ಮಹಿಳೆಯರ ಆ್ಯಷಸ್ ಸರಣಿಯ ವೇಳಾಪಟ್ಟಿಯನ್ನು ಕ್ರಿಕೆಟ್ ಅಸ್ಟ್ರೇಲಿಯಾ ಪ್ರಕಟಿಸಿದೆ. ಕೋವಿಡ್ ಭೀತಿಯಿಂದಾಗಿ ಈ ಬಾರಿ ಆ್ಯಷಸ್ ಸರಣಿ ಖಾಲಿ ಮೈದಾನದಲ್ಲಿ ನಡೆಯುವ ಸಾಧ್ಯತೆ ದಟ್ಟವಾಗತೊಡಗಿದೆ.

ಪುರಷರ ಆ್ಯಷಸ್ ಸರಣಿಯು ಬ್ರಿಸ್ಬೇನ್‌ನಲ್ಲಿ ಡಿಸೆಂಬರ್ 08ರಿಂದ ಆರಂಭವಾಗಲಿದೆ. ಇನ್ನು ಡಿಸೆಂಬರ್ 16ರಿಂದ ಆರಂಭವಾಗಲಿರುವ ಹಗಲು-ರಾತ್ರಿ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯಕ್ಕೆ ಅಡಿಲೇಡ್‌ ಮೈದಾನ ಆತಿಥ್ಯವನ್ನು ವಹಿಸಲಿದೆ. ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ. ಪ್ರತಿಬಾರಿ ಆ್ಯಷಸ್ ಸರಣಿಯ ಫೈನಲ್‌/ಕೊನೆಯ ಪಂದ್ಯಕ್ಕೆ ಸಿಡ್ನಿ ಮೈದಾನ ಸಾಕ್ಷಿಯಾಗುತ್ತಿತ್ತು. ಈ ಬಾರಿ ಆ್ಯಷಸ್ ಸರಣಿಯ ಕೊನೆಯ ಪಂದ್ಯಕ್ಕೆ ಸಿಡ್ನಿ ಆತಿಥ್ಯ ವಹಿಸುತ್ತಿಲ್ಲ. ಬದಲಾಗಿ ಜನವರಿ 05ರಿಂದ ಆರಂಭವಾಗಲಿರುವ 4ನೇ ಪಂದ್ಯಕ್ಕೆ ಸಿಡ್ನಿ ಆತಿಥ್ಯವನ್ನು ವಹಿಸಲಿದೆ. ಇನ್ನು ಆ್ಯಷಸ್ ಸರಣಿಯ ಕೊನೆಯ ಹಾಗೂ 5ನೇ ಪಂದ್ಯವು ಜನವರಿ 14ರಿಂದ ಆರಂಭವಾಗಲಿದ್ದು, ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿದೆ.

  
2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಆ್ಯಷಸ್ ಸರಣಿಯಲ್ಲಿ ಉಭಯ ತಂಡಗಳು 2-2ರಲ್ಲಿ ಡ್ರಾ ಸಾಧಿಸಿದ್ದವು. ಇದರೊಂದಿಗೆ ಆ್ಯಷಸ್ ಟ್ರೋಫಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಶದಲ್ಲಿದೆ. 

ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ಆ್ಯಷಸ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಆಫ್ಘಾನಿಸ್ತಾನದ ವಿರುದ್ದ ಏಕೈಕ ಟೆಸ್ಟ್‌ ಪಂದ್ಯವನ್ನಾಡಲಿದೆ. ಆಫ್ಘಾನ್‌ ವಿರುದ್ದದ ಪಂದವು ನವೆಂಬರ್ 27ರಿಂದ ಆರಂಭವಾಗಲಿದ್ದು ಬ್ಲಂಡ್‌ಸ್ಟೋನ್ ಅರೇನಾ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಟೆಸ್ಟ್‌ ಪಂದ್ಯವು ಕಳೆದ ವರ್ಷವೇ ಜರುಗಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದಾಗಿ ಈ ಪಂದ್ಯವನ್ನು ಮುಂದೂಡಲಾಗಿತ್ತು.

ಆ್ಯಷಸ್ ಸರಣಿ ಮುಗಿದ ಬಳಿಕ ಆಸ್ಟ್ರೇಲಿಯಾ ತಂಡವು ಜನವರಿ 30ರಿಂದ ಫೆಬ್ರವರಿ 08ರವರೆಗೆ 3 ಪಂದ್ಯಗಳ ಏಕದಿನ ಸರಣಿ ಹಾಗೂ ಒಂದು ಟಿ20 ಪಂದ್ಯವನ್ನಾಡಲಿದೆ. ಇದಾದ ಬಳಿಕ ಫೆಬ್ರವರಿ 11ರಿಂದ 20ರವರೆಗೆ ಶ್ರೀಲಂಕಾ ವಿರುದ್ದ 5 ಪಂದ್ಯಗಳ ಟಿ20 ಸರಣಿ ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

ಇನ್ನು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡವು ಕ್ಯಾನ್‌ಬೆರ್ರಾದಲ್ಲಿ ಜನವರಿ 27ರಿಂದ 30ರವರೆಗೆ ನಡೆಯಲಿರುವ ಆ್ಯಷಸ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ದ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.