ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ
* ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ
* ಐಪಿಎಲ್‌ನಲ್ಲಿ ಪಾಲ್ಗೊಂಡ ಬಹುತೇಕ ಆಟಗಾರರಿಗೆ ವಿಶ್ರಾಂತಿ.
* ಜೂನ್ 02ರಿಂದ ನ್ಯೂಜಿಲೆಂಡ್ ವಿರುದ್ದ ಆರಂಭವಾಗಲಿರುವ ಟೆಸ್ಟ್ ಸರಣಿ.
ಲಂಡನ್(ಮೇ.19): ಮುಂಬರುವ ನ್ಯೂಜಿಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಕೋಚ್ ಕ್ರಿಸ್ ಸಿಲ್ವರ್‌ವುಡ್ ಪ್ರಕಟಿಸಿದ್ದಾರೆ.
ಇತ್ತೀಚೆಗಷ್ಟೇ ಸ್ಥಗಿತವಾಗಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಜಾನಿ ಬೇರ್‌ಸ್ಟೋವ್ ಹಾಗೂ ಕ್ರಿಸ್ ವೋಕ್ಸ್‌ಗೆ ವಿಶ್ರಾಂತಿ ನೀಡಲಾಗಿದೆ. ಈ ಆಟಗಾರರೆಲ್ಲ ಕ್ವಾರಂಟೈನ್ ಅವಧಿ ಮುಗಿಸಿ ತಮ್ಮ ಕುಟುಂಬದೊಟ್ಟಿಗೆ ಕಾಲ ಕಳೆದು, ಬಳಿಕ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ತಮ್ಮ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಇನ್ನು ಗಾಯದ ಸಮಸ್ಯೆ ಎದುರಿಸುತ್ತಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.
ನಾವು ವಿಶ್ವದ ಎರಡು ಬಲಿಷ್ಠ ತಂಡಗಳಾದ ನ್ಯೂಜಿಲೆಂಡ್ ಹಾಗೂ ಭಾರತದ ವಿರುದ್ದ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡಲಿದ್ದೇವೆ. ಈ ಮೂಲಕ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆ್ಯಷಸ್ ಸರಣಿಗೆ ಈಗಿನಿಂದಲೇ ಸಿದ್ದತೆ ನಡೆಸಲಿದ್ದೇವೆ ಎಂದು ಕೋಚ್ ಸಿಲ್ವರ್‌ವುಡ್ ತಿಳಿಸಿದ್ದಾರೆ.
ಜೋಸ್ ಬಟ್ಲರ್ ಕ್ರಿಕೆಟಿಗನಾಗಲು ದ್ರಾವಿಡ್, ಗಂಗೂಲಿ ಮತ್ತು ನೀವೂ ಕಾರಣ!
ಕೆಲವು ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದರೆ, ಮತ್ತೆ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಆವೃತ್ತಿಯ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಜೇಮ್ಸ್ ಬ್ರಾಸಿ ಹಾಗೂ ಓಲಿ ರಾಬಿನ್‌ಸನ್‌ಗೆ ರಾಷ್ಟ್ರೀಯ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ನೀಡಲಾಗಿದೆ. ಇದೇ ವೇಳೆ 2019ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪರ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ಕ್ರೆಗ್ ಓವರ್‌ಟನ್‌ಗೂ ಬುಲಾವ್ ನೀಡಲಾಗಿದೆ ಎಂದು ಇಂಗ್ಲೆಂಡ್ ಕೋಚ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ದದ 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಜೂನ್ 02ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಇನ್ನು ಜೂನ್ 10ರಿಂದ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನ ಆತಿಥ್ಯವನ್ನು ವಹಿಸಲಿದೆ.
ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಜೋ ರೂಟ್(ನಾಯಕ), ಜೇಮ್ಸ್ ಆ್ಯಂಡರ್‌ಸನ್, ಜೇಮ್ಸ್ ಬ್ರಾಸಿ, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜಾಕ್ ಕ್ರಾವ್ಲೆ, ಬೆನ್ ಪೋಕ್ಸ್, ಡೇನಿಯಲ್ ಲಾರೆನ್ಸ್, ಜಾಕ್ ಲೀಚ್, ಕ್ರೆಗ್ ಓವರ್‌ಟನ್, ಓಲಿ ಪೋಪ್, ಓಲಿ ರಾಬಿನ್‌ಸನ್, ಡಾಮ್ ಸಿಬ್ಲಿ, ಓಲಿ ಸ್ಟೋನ್, ಮಾರ್ಕ್ ವುಡ್.