ಸಿಡ್ನಿ(ಜ.13): ಭಾರತ ಕ್ರಿಕೆಟ್‌ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆಸ್ಪ್ರೇಲಿಯಾ ವಿರುದ್ಧ 3ನೇ ಟೆಸ್ಟ್‌ನಲ್ಲಿ ಭಾರತ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತಾದರೂ, ಪಂದ್ಯದ ವೇಳೆ ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಫೀಲ್ಡಿಂಗ್‌ ವೇಳೆ ಪಕ್ಕೆ ನೋವಿಗೆ ಗುರಿಯಾದ ಪ್ರಮುಖ ವೇಗಿ ಜಸ್ಪ್ರೀತ್‌ ಬುಮ್ರಾ 4ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ.

ಅವರ ಗಾಯದ ಪ್ರಮಾಣದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ಪರಿಶೀಲನೆ ನಡೆಸಲಿದೆ. ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿ ವೇಳೆಗೆ ಗುಣಮುಖರಾಗುವ ನಿರೀಕ್ಷೆ ಇದೆ ಎಂದು ತಂಡದ ಮೂಲಗಳು ತಿಳಿಸಿವೆ.

ಇದೇ ವೇಳೆ, ಎಡಗೈ ಹೆಬ್ಬೆರಳು ಮುರಿದಿರುವ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಲ್ರೌಂಡರ್‌ ರವೀಂದ್ರ ಜಡೇಜಾ, ಸ್ನಾಯು ಸೆಳೆತಕ್ಕೆ ಗುರಿಯಾಗಿರುವ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಸಹ ಬ್ರಿಸ್ಬೇನ್ ಟೆಸ್ಟ್‌ಗೆ ಲಭ್ಯರಿರುವುದಿಲ್ಲ. ಇನ್ನು ಸೊಂಟದ ನೋವಿನಿಂದ ಬಳಲುತ್ತಿರುವ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌, ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವ ವೇಳೆ ಕೈಗೆ ಬಲವಾದ ಪೆಟ್ಟು ತಿಂದ ಮಯಾಂಕ್‌ ಅಗರ್‌ವಾಲ್‌ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.

ಜಡ್ಡು, ವಿಹಾರಿ ಬಳಿಕ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಬ್ರಿಸ್ಬೇನ್‌ ಟೆಸ್ಟ್‌ನಿಂದ ಔಟ್‌..!

ಸರಣಿಗೂ ಮೊದಲೇ ಅನುಭವಿ ವೇಗಿ ಇಶಾಂತ್‌ ಶರ್ಮಾ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಸ್ನಾಯು ಸೆಳೆತದಿಂದಾಗಿ ರೋಹಿತ್‌ ಶರ್ಮಾ ಮೊದಲ 2 ಟೆಸ್ಟ್‌ಗಳಿಗೆ ಲಭ್ಯವಿರಲಿಲ್ಲ. ಮೊದಲೆರಡು ಟೆಸ್ಟ್‌ಗಳಲ್ಲಿ ಆಡದ ಕೆ.ಎಲ್‌.ರಾಹುಲ್‌ 3ನೇ ಟೆಸ್ಟ್‌ನಲ್ಲಿ ಅವಕಾಶ ಸಿಗುವ ಮೊದಲೇ ಗಾಯಗೊಂಡು ಭಾರತಕ್ಕೆ ವಾಪಸಾದರು. ಉಮೇಶ್‌ ಯಾದವ್‌ ಸಹ ಗಾಯಗೊಂಡು ತವರಿಗೆ ಮರಳಿದರು. ಹೀಗೆ ಆಸ್ಪ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ.

4ನೇ ಟೆಸ್ಟ್‌ಗೆ ಹೇಗಿರಲಿದೆ ತಂಡದ ಸಂಯೋಜನೆ?

ಬ್ರಿಸ್ಬೇನ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಹಲವು ಬದಲಾವಣೆ ಆಗಲಿದೆ. ಲಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದ ಪೃಥ್ವಿ ಶಾಗೆ ಮತ್ತೊಂದು ಅವಕಾಶ ಸಿಗಲಿದೆ. ಮೊಹಮದ್‌ ಸಿರಾಜ್‌, ನವ್‌ದೀಪ್‌ ಸೈನಿ, ಶಾರ್ದೂಲ್‌ ಠಾಕೂರ್‌ ಹಾಗೂ ಟಿ.ನಟರಾಜನ್‌ ವೇಗಿಗಳಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಅಶ್ವಿನ್‌ ಹೊರಬಿದ್ದರೆ ಕುಲ್‌ದೀಪ್‌ ಯಾದವ್‌ ಇಲ್ಲವೇ ಸೀಮಿತ ಓವರ್‌ ಸರಣಿ ಬಳಿಕ ಆಸ್ಪ್ರೇಲಿಯಾದಲ್ಲೇ ಉಳಿದುಕೊಂಡಿರುವ ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ಸಿಗಲಿದೆ.