ಕ್ರಿಕೆಟಿಗರಿಗೆ ಮಾರ್ಗಸೂಚಿ ಪ್ರಕಟಿಸಿದ ಐಸಿಸಿ; ಬಾಲ್ ಮುಟ್ಟಿದ ಮೇಲೆ ಸ್ಯಾನಿಟೈಸರ್!
ಕೊರೋನಾ ಭೀತಿಯ ಹಿನ್ನಲೆಯಲ್ಲಿ ಐಸಿಸಿ ಕ್ರಿಕೆಟಿಗರಿಗೆ ಮಾರ್ಗಸೂಚಿ ಪ್ರಕಟಿಸಿದೆ. ಈ ಕುರಿತಾದ ಒಂದು ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ದುಬೈ(ಮೇ.24): ಕ್ರಿಕೆಟ್ ಪುನಾರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಟಗಾರರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿ ಆಟಗಾರರು ಪಂದ್ಯದ ವೇಳೆ ಪಾಲಿಸಬೇಕಿರುವ ನಿಯಮಗಳೇನು, ಅಭ್ಯಾಸದ ವೇಳೆ ಪಾಲಿಸಬೇಕಿರುವ ನಿಯಮಗಳೇನು ಎನ್ನುವುದನ್ನು ತಿಳಿಸಲಾಗಿದೆ.
ಚೆಂಡು ಸೋಂಕಿನ ಮೂಲವಾಗಬಹುದು ಎಂದು ಅಭಿಪ್ರಾಯಿಸಿರುವ ಐಸಿಸಿ, ಆಟಗಾರರು ಪ್ರತಿ ಬಾರಿ ಚೆಂಡನ್ನು ಮುಟ್ಟಿದಾಗ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ಪ್ರತಿ ಆಟಗಾರ ತನ್ನ ಕಿಸೆಯಲ್ಲಿ ಸ್ಯಾನಿಟೈಸರ್ ಇಟ್ಟುಕೊಳ್ಳಬೇಕಾಗುತ್ತದೆ. ಆಟಗಾರರು ತಮ್ಮ ಕ್ಯಾಪ್, ಸ್ವೆಟ್ಟರ್ ಹಾಗೂ ಸನ್‌ಗ್ಲಾಸ್‌ಗಳನ್ನು ಅಂಪೈರ್‌ಗಳಿಗೆ ನೀಡುವಂತಿಲ್ಲ. ಅಂಪೈರ್‌ಗಳು ಸುರಕ್ಷತೆ ದೃಷ್ಟಿಯಿಂದ ಗ್ಲೌಸ್ ಧರಿಸುವುದು ಉತ್ತಮ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮೈದಾನದಲ್ಲಿ ಆಟಗಾರರು 1.5 ಮೀಟರ್‌ನಷ್ಟು ಅಂತರ ಕಾಯ್ದುಕೊಳ್ಳಬೇಕಿದೆ. ಅಂಪೈರ್ ಸಹ ಆಟಗಾರರಿಂದ ಅಂತರ ಕಾಯ್ದುಕೊಳ್ಳಬೇಕಾಗಬಹುದು. ಹೀಗಾದಲ್ಲಿ ಅಂಪೈರ್‌ಗಳು ನೀಡುವ ತೀರ್ಪುಗಳ ಮೇಲೆ ಪರಿಣಾಮ ಬೀರಲಿದೆ. ಇನ್ನು ಅಭ್ಯಾಸದ ವೇಳೆ ಆಟಗಾರರು ಟಾಯ್ಲೆಟ್‌ಗಳನ್ನು ಬಳಕೆ ಮಾಡುವಂತಿಲ್ಲ. ಯಾವುದೇ ಆಟಗಾರನಿಗೆ ಸೋಂಕು ತಗುಲಿರುವುದು ದೃಢವಾದರೆ ಇಡೀ ತಂಡವನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಕೊರೋನಾ ಭೀತಿ; ಚೆಂಡಿಗೆ ಎಂಜಲು ಬಳಕೆ ನಿಷೇಧಿಸಲು ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು
ಬೌಲರ್‌ಗಳಿಗೆ ಅಭ್ಯಾಸ ಕಡ್ಡಾಯ: ಕೊರೋನಾದಿಂದಾಗಿ ಗೃಹ ಬಂಧನಕ್ಕೆ ಒಳಗಾಗಿರುವ ಆಟಗಾರರು, ಏಕಾಏಕಿ ಕ್ರಿಕೆಟ್ ಮೈದಾನಕ್ಕಿಳಿಯಲು ಸಾಧ್ಯವಿಲ್ಲ. ಪ್ರಮುಖವಾಗಿ ಬೌಲರ್‌ಗಳು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿರಲಿದೆ. ಹೀಗಾಗಿ ಬೌಲರ್‌ಗಳು ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗುವ ಮುನ್ನ 8ರಿಂದ 12 ವಾರ ಅಭ್ಯಾಸ ನಡೆಸಬೇಕು. ಏಕದಿನಕ್ಕೆ 6 ವಾರ, ಟಿ20ಗೆ 5ರಿಂದ 6 ವಾರಗಳ ಅಭ್ಯಾಸ ನಡೆಸಬೇಕು ಎಂದು ಐಸಿಸಿ ಸೂಚಿಸಿದೆ.
ಐಸಿಸಿ ಮಾರ್ಗಸೂಚಿಯ ಪ್ರಮುಖಾಂಶ
ಪ್ರತಿ ಬಾರಿ ಚೆಂಡು ಮುಟ್ಟಿದಾಗ ಸ್ಯಾನಿಟೈಸರ್ ಬಳಸಬೇಕು
ಆಟಗಾರರು ತಮ್ಮ ಕ್ಯಾಪ್, ಸ್ವೆಟ್ಟರ್, ಸನ್‌ಗ್ಲಾಸ್‌ಗಳನ್ನು ಅಂಪೈರ್‌ಗಳಿಗೆ ನೀಡುವಂತಿಲ್ಲ
ಅಂಪೈರ್‌ಗಳು ಗ್ಲೌಸ್ ಧರಿಸಬೇಕು, ಆಟಗಾರರು 1.5 ಮೀಟರ್ ಅಂತರ ಕಾಯ್ದುಕೊಳ್ಳಬೇಕು
ಚೆಂಡಿಗೆ ಎಂಜಲು ಹಚ್ಚುವಂತಿಲ್ಲ
ಅಭ್ಯಾಸದ ವೇಳೆ ಟಾಯ್ಲೆಟ್‌ಗೂ ಹೋಗುವಂತಿಲ್ಲ
ಯಾವುದೇ ಆಟಗಾರನಿಗೆ ಸೋಂಕು ತಗುಲಿದರೆ ಇಡೀ ತಂಡವೇ ಕ್ವಾರಂಟೈನ್.