ಕಾಮನ್‌ವೆಲ್ತ್‌ ಗೇಮ್ಸ್‌ ಮಹತ್ವದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಶಾಕ್ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕಿ ಹೀದರ್ ನೈಟ್ ಸರಣಿಯಿಂದಲೇ ಔಟ್ಗಾಯದ ಸಮಸ್ಯೆಯಿಂದಾಗಿ ದಿ ಹಂಡ್ರಡ್ ಟೂರ್ನಿಯಿಂದಲೂ ಹೀದರ್ ನೈಟ್ ಔಟ್

ಬರ್ಮಿಂಗ್‌ಹ್ಯಾಮ್‌(ಆ.04): ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಈಗಾಗಲೇ ಬಹುತೇಕ ಸೆಮೀಸ್‌ ಹಾದಿಯನ್ನು ಖಚಿತಪಡಿಸಿಕೊಂಡಿರುವ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ನಾಯಕಿ ಹೀದರ್ ನೈಟ್‌, ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹೀದರ್ ನೈಟ್ ಅವರು ತಂಡದಿಂದ ಹೊರಬಿದ್ದಿರುವುದು ಇಂಗ್ಲೆಂಡ್ ತಂಡದ ಪಾಲಿಗೆ ದೊಡ್ಡ ಹಿನ್ನೆಡೆಯಾಗುವ ಸಾಧ್ಯತೆಯಿದೆ. 

2017ರಲ್ಲಿ ಇಂಗ್ಲೆಂಡ್‌ಗೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕಿ ಹೀದರ್ ನೈಟ್‌, ಗ್ರೂಪ್‌ ಹಂತದ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ದಕ್ಷಿಣ ಆಫ್ರಿಕಾ ಎದುರಿನ ಸೀಮಿತ ಓವರ್‌ಗಳ ಸರಣಿಯ ವೇಳೆಯಲ್ಲಿ ಹೀದರ್ ನೈಟ್‌ ಗಾಯಗೊಂಡಿದ್ದರು. ಹೀಗಾಗಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಹರಿಣಗಳೆದುರಿನ ಎರಡನೇ ಹಾಗೂ ಮೂರನೇ ಟಿ20 ಪಂದ್ಯಗಳಿಂದ ಹೀದರ್‌ ನೈಟ್‌ಗೆ ವಿಶ್ರಾಂತಿ ನೀಡಲಾಗಿತ್ತು. ಹೀದರ್‌ ನೈಟ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಲ್ರೌಂಡರ್ ನಥಾಲಿ ಶೀವರ್, ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದರು. ಇದೀಗ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಹೀದರ್ ನೈಟ್ ಅನುಪಸ್ಥಿತಿಯಲ್ಲಿ ನಥಾಲಿ ಶೀವರ್ ಇಂಗ್ಲೆಂಡ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದು, ಇಂಗ್ಲೆಂಡ್ ಆಡಿದ ಎರಡೂ ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿದೆ.

Commonwealth Games: ಬಾರ್ಬಡೋಸ್ ಬಗ್ಗುಬಡಿದು ಸೆಮೀಸ್‌ಗೆ ಲಗ್ಗೆಯಿಟ್ಟ ಮಹಿಳಾ ಟೀಂ ಇಂಡಿಯಾ

ಹೀದರ್‌ ನೈಟ್‌, ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹೊರಬಿದ್ದ ಬೆನ್ನಲ್ಲೇ , ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಆದರೆ ಇದುವರೆಗೂ ಇಂಗ್ಲೆಂಡ್ ಕ್ರಿಕೆಟ್‌ ತಂಡವು ಹೀದರ್‌ ನೈಟ್‌ಗೆ ಬದಲಿ ಆಟಗಾರರನ್ನು ಹೆಸರಿಸಿಲ್ಲ. ಈ ಕುರಿತಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಒಂದು ಪ್ರಕಟಣೆ ಹೊರಡಿಸಿದ್ದು, 'ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ನಾಯಕಿ ಹೀದರ್ ನೈಟ್‌, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ದ ಹಂಡ್ರೆಡ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯ ಮೇಲೆ ಹೀದರ್ ನೈಟ್‌ ಸೊಂಟ ನೋವಿಗೆ ಒಳಗಾಗಿದ್ದರು. ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ತಂಡದಿಂದ ಹೊರಬಿದ್ದಿದ್ದು, ಚಿಕಿತ್ಸೆ ಮುಂದುವರೆಸಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಥಾಲಿ ಶೀವರ್ ನಾಯಕಿಯಾಗಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹೀದರ್ ಅವರಿಗೆ ಬದಲಿ ಆಟಗಾರರನ್ನು ಹೆಸರಿಸಿಲ್ಲ, 14 ಆಟಗಾರ್ತಿಯರನ್ನೊಳಗೊಂಡ ತಂಡವು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್ ತಂಡವು ತಿಳಿಸಿದೆ.

Scroll to load tweet…

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಇಂಗ್ಲೆಂಡ್ ತಂಡವು ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಈಗಾಗಲೇ ಸೆಮೀಸ್ ಹಾದಿಯನ್ನು ಖಚಿತಪಡಿಸಿಕೊಂಡಿದೆ. ಇದೀಗ ಇಂಗ್ಲೆಂಡ್ ತಂಡವು ತನ್ನ ಪಾಲಿನ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈಗಾಗಲೇ ಗ್ರೂಪ್ 'ಎ' ನಿಂದ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.