* ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸೆಮೀಸ್‌ಗೆ ಲಗ್ಗೆಯಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ* ಬಾರ್ಬಡೋಸ್ ಎದುರು 100 ರನ್‌ಗಳ ಜಯ ಸಾಧಿಸಿದ ಭಾರತ ಮಹಿಳಾ ತಂಡ* ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ ಜೆಮಿಯಾ ರೋಡ್ರಿಗಸ್‌ 

ಬರ್ಮಿಂಗ್‌ಹ್ಯಾಮ್‌(ಆ.04): ಜೆಮಿಯಾ ರೋಡ್ರಿಗಸ್‌ ಆಕರ್ಷಕ ಬ್ಯಾಟಿಂಗ್ ಹಾಗೂ ರೇಣುಕಾ ಸಿಂಗ್ ಮಾರಕ ದಾಳಿಯ ನೆರವಿನಿಂದ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಬಾರ್ಬಡೋಸ್ ಎದುರು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಮಹಿಳಾ ಟೀಂ ಇಂಡಿಯಾ ಯಶಸ್ವಿಯಾಗಿದೆ.

ಎಜ್‌ಬಾಸ್ಟನ್‌ನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹರ್ಮನ್‌ಪ್ರೀತ್ ಕೌರ್ ಪಡೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧನಾ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಶಫಾಲಿ ವರ್ಮಾ ಹಾಗೂ ಜೆಮಿಯಾ ರೋಡ್ರಿಗಸ್ ಜೋಡಿ ಚುರುಕಿನ 71 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಶಫಾಲಿ ವರ್ಮಾ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಶಫಾಲಿ ಕೇವಲ 26 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 43 ರನ್‌ ಬಾರಿಸಿ ರನೌಟ್‌ ಆಗಿ ಪೆವಿಲಿಯನ್‌ ಸೇರಿದರು. ಇದರ ಬೆನ್ನಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್(0) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ತಾನಿಯಾ ಭಾಟಿಯಾ(6) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ.

ಆಕರ್ಷಕ ಅರ್ಧಶತಕ ಚಚ್ಚಿದ ಜೆಮಿಯಾ: ಶಫಾಲಿ ಜತೆ ಉತ್ತಮ ಜತೆಯಾಟ ನಿಭಾಯಿಸಿದ ಜೆಮಿಯಾ ರೋಡ್ರಿಗಸ್‌ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದರು. ಜೆಮಿಯಾ 46 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 56 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ 5ನೇ ವಿಕೆಟ್‌ಗೆ ಜತೆಯಾದ ಜಮಿಯಾ ಹಾಗೂ ದೀಪ್ತಿ ಶರ್ಮಾ ಜೋಡಿ ಮುರಿಯದ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ದೀಪ್ತಿ ಶರ್ಮಾ 28 ಎಸೆತಗಳಲ್ಲಿ ಅಜೇಯ 34 ರನ್ ಚಚ್ಚಿದರು.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾರ್ಬಡೋಸ್ ತಂಡವು ರೆಣುಕಾ ಸಿಂಗ್ ಮಾರಕ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 62 ರನ್‌ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಮಹಿಳಾ ವೇಗಿ ರೇಣುಕಾ ಸಿಂಗ್ 4 ಓವರ್ ಬೌಲಿಂಗ್ ಮಾಡಿ ಕೇವಲ 10 ರನ್ ನೀಡಿ 4 ವಿಕೆಟ್ ಕಬಳಿಸಿದರೇ, ಮೇಘನಾ ಸಿಂಗ್, ಸ್ನೆಹ್ ರಾಣಾ, ರಾಧಾ ಯಾದವ್ ಹಾಗೂ ಹರ್ಮನ್‌ಪ್ರೀತ್ ಕೌರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

Scroll to load tweet…

ಸೆಮೀಸ್‌ ಹಾದಿ ಸುಗಮ: ಭಾರತ ತಂಡವು 'ಎ' ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾ ತಂಡವು 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದು, 'ಬಿ' ಗುಂಪಿನ ಎರಡನೇ ಸ್ಥಾನಿಯ ವಿರುದ್ದ ಹೋರಾಟ ನಡೆಸಲಿದೆ. ಇನ್ನು 'ಬಿ' ಗುಂಪಿನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳು ಆಡಿದ ಎರಡೂ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಗುಂಪುಹಂತದ ಕೊನೆಯ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ಆ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ಭಾರತಕ್ಕೆ ಸೆಮೀಸ್‌ನಲ್ಲಿ ಎದುರಾಗಲಿದೆ.