ಕೊಲಂಬೊ ಟೆಸ್ಟ್‌ನ ಮೊದಲ ದಿನ ಕೈಗೆ ಪೆಟ್ಟು ಬಿದ್ದ ಕಾರಣ ರಿಷಭ್ ಪಂತ್ ಮೈದಾನ ತೊರೆದಿದ್ದರೂ, ಅವರು ಎರಡನೇ ದಿನ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಕೋಚ್ ಖಚಿತಪಡಿಸಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಸಿಡಿಸಿದ ಶತಕದ (117) ನೆರವಿನಿಂದ ಭಾರತ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.

ಕೊಲಂಬೊ: ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ತಂಡಕ್ಕೆ ಆತಂಕ ಎದುರಾಗಿದೆ. ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರೂ ಬ್ಯಾಟಿಂಗ್ ಕೋಚ್ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದಾರೆ.

ನಡೆದಿದ್ದೇನು?

ಭಾರತದ ಇನ್ನಿಂಗ್ಸ್‌ನ 58ನೇ ಓವರ್‌ನಲ್ಲಿ ಘಟನೆ ನಡೆದಿದೆ. ಲಂಕಾ ವೇಗಿ ಲಹಿರು ಕುಮಾರ ಎಸೆದ ಚೆಂಡು ರಿಷಭ್ ಪಂತ್ ಅವರ ಕೈಗೆ ಬಲವಾಗಿ ಬಡಿಯಿತು. ಚೆಂಡು ತಗುಲಿದ ತಕ್ಷಣ ಪಂತ್ ತೀವ್ರ ನೋವಿನಿಂದ ನರಳಿದರು. ತಕ್ಷಣವೇ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದರೂ ಪಂತ್ ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಕೇವಲ 3 ರನ್ ಗಳಿಸಿದ್ದ ಪಂತ್ 'ರಿಟೈರ್ಡ್ ಹರ್ಟ್' ಆಗಿ ಪೆವಿಲಿಯನ್ ಸೇರಿದರು.

ಬ್ಯಾಟಿಂಗ್ ಕೋಚ್ ಅಪ್‌ಡೇಟ್

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ರಿಷಭ್ ಪಂತ್ ನಾಳೆ ಬ್ಯಾಟಿಂಗ್ ಮಾಡಲು ಫಿಟ್ ಆಗಿರುತ್ತಾರೆ ಎಂದು ತಿಳಿಸಿದ್ದಾರೆ. ಗಾಯ ಅಷ್ಟೊಂದು ಗಂಭೀರವಾಗಿಲ್ಲ ಎಂಬ ಸುಳಿವು ಸಿಕ್ಕಿದ್ದು, ಎರಡನೇ ದಿನ ಪಂತ್ ಕ್ರೀಸ್‌ಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ.

ಕನ್ನಡಿಗ ಪಡಿಕ್ಕಲ್ 193 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 117 ರನ್ ಗಳಿಸಿ ಮಿಂಚಿದರು. ಇದು ಅವರ ಸತತ ಎರಡನೇ ಟೆಸ್ಟ್ ಶತಕವಾಗಿದೆ. ನಾಯಕ ಶುಭಮನ್ ಗಿಲ್ 50 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 45 ಮತ್ತು ರವೀಂದ್ರ ಜಡೇಜಾ 43 ರನ್ ಕಾಣಿಕೆ ನೀಡಿದರು. ಕೆ.ಎಲ್ ರಾಹುಲ್ 18 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಅಸಿತ ಫರ್ನಾಂಡೋ 3 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಸವಾಲೊಡ್ಡಿದರು. ಸದ್ಯ ಕ್ರೀಸ್‌ನಲ್ಲಿ ಧ್ರುವ್ ಜುರೇಲ್ (7*) ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ಸಾರಂಶ್ ಜೈನ್ (4*) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಎರಡನೇ ದಿನ ಪಂತ್ ಮರಳಿ ಬ್ಯಾಟಿಂಗ್‌ಗೆ ಬಂದರೆ ಭಾರತ ಬೃಹತ್ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿದೆ.