* ಏಕದಿನ ವಿಶ್ವಕಪ್‌: ರೋಹಿತ್‌, ದ್ರಾವಿಡ್‌ ಜೊತೆ ಅಗರ್ಕರ್‌ ಚರ್ಚೆ* ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಕೇವಲ ಎರಡೂವರೆ ತಿಂಗಳು ಬಾಕಿ* ತಂಡದ ಆಯ್ಕೆ ಕುರಿತಂತೆ ಚರ್ಚಿಸಲು ಕೆರಿಬಿಯನ್ ಪ್ರವಾಸ

ನವದೆಹಲಿ(ಜು.19): ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ ಎರಡೂವರೆ ತಿಂಗಳಷ್ಟೇ ಬಾಕಿ ಇದ್ದು, ತಂಡದ ಆಯ್ಕೆ ಬಗ್ಗೆ ಚರ್ಚಿಸಲು ಸದ್ಯದಲ್ಲೇ ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ವೆಸ್ಟ್‌ಇಂಡೀಸ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ವಿಂಡೀಸ್‌ ವಿರುದ್ಧದ ಸೀಮಿತ ಓವರ್‌ ಸರಣಿ ಆರಂಭಕ್ಕೂ ಮುನ್ನ ಅಗರ್ಕರ್‌, ನಾಯಕ ರೋಹಿತ್‌ ಶರ್ಮಾ ಹಾಗೂ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ ಜೊತೆ ಚರ್ಚಿಸಲಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವೇಗಿ ಜಸ್‌ಪ್ರೀತ್‌ ಬುಮ್ರಾ, ಬ್ಯಾಟರ್‌ಗಳಾದ ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌ರ ಆಯ್ಕೆ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. 

ಭಾರತ ಕ್ರಿಕೆಟ್‌ ತಂಡವು ಕಳೆದೊಂದು ದಶಕದಿಂದಲೂ ಐಸಿಸಿ ಟ್ರೋಫಿಯ ಬರ ಎದುರಿಸುತ್ತಾ ಬಂದಿದೆ. 2013ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ ಹಲವು ಬಾರಿ ಐಸಿಸಿ ಟೂರ್ನಿಯಲ್ಲಿ ನಾಕೌಟ್‌ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸುತ್ತಲೇ ಬಂದಿದೆ. ಇನ್ನು ಧೋನಿ ನೇತೃತ್ವದಲ್ಲೇ ಟೀಂ ಇಂಡಿಯಾ 2011ರಲ್ಲಿ ಕೊನೆಯ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು.ಇದಾದ ಬಳಿಕ ಭಾರತ ವಿಶ್ವಕಪ್ ಜಯಿಸಿಲ್ಲ. ಇದೀಗ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸುತ್ತಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. 

India vs West Indies: 100ನೇ ಟೆಸ್ಟ್‌ ಕದನಕ್ಕೆ ಭಾರತ-ವೆಸ್ಟ್ ಇಂಡೀಸ್ ಸನ್ನದ್ದ..!

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್‌ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಅಂಡರ್‌ -23 ಏಷ್ಯಾ ಕಪ್‌: ಭಾರತ-ಪಾಕ್‌ ಮುಖಾಮುಖಿ ಇಂದು

ಕೊಲಂಬೊ: ಅಂಡರ್‌-23 ಉದಯೋನ್ಮುಖ ಆಟಗಾರರ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಬುಧವಾರ ಭಾರತ ‘ಎ’ ಹಾಗೂ ಪಾಕಿಸ್ತಾನ ‘ಎ’ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈಗಾಗಲೇ ಗುಂಪು ಹಂತದಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಗುಂಪಿನಲ್ಲಿ ಅಗ್ರಸ್ಥಾನಕ್ಕಾಗಿ ಸೆಣಸಲಿವೆ. ‘ಬಿ’ ಗುಂಪಿನಲ್ಲಿ ಭಾರತ ಸದ್ಯ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 2ನೇ ಸ್ಥಾನದಲ್ಲಿದೆ. ಭಾರತ ತಂಡವನ್ನು ಯಶ್‌ ಧುಳ್‌ ಮುನ್ನಡೆಸುತ್ತಿದ್ದು, ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಅಭಿಷೇಕ್‌ ಶರ್ಮಾ, ಸಾಯಿ ಸುದರ್ಶನ್‌, ರಾಜವರ್ಧನ್‌ ಹಂಗಾರ್ಗೇಕರ್‌, ರಿಯಾನ್‌ ಪರಾಗ್‌, ಧೃವ್‌ ಜುರೆಲ್‌ ಜೊತೆ ರಾಜ್ಯದ ನಿಕಿನ್‌ ಜೋಸ್‌ ಕೂಡ ತಂಡದಲ್ಲಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಕನ್ನಡದ ತ್ರಿಮೂರ್ತಿಗಳ ಕಮಾಲ್..! ಕರ್ನಾಟಕದಲ್ಲಿ ಮತ್ತೆ ವೇಗಿಗಳ ಉದಯ?

ಪಂದ್ಯ: ಮಧ್ಯಾಹ್ನ 2.30ರಿಂದ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಏಕದಿನ ರ‍್ಯಾಂಕಿಂಗ್‌: 6ನೇ ಸ್ಥಾನಕ್ಕೇರಿದ ಸ್ಮೃತಿ ಮಂಧನಾ

ದುಬೈ: ಭಾರತದ ಸ್ಮೃತಿ ಮಂಧನಾ ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 6ನೇ ಸ್ಥಾನ ಪಡೆದಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 2 ಸ್ಥಾನ ಕುಸಿದಿದ್ದು, 8ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ರಾಜೇಶ್ವರಿ ಗಾಯಕ್ವಾಡ್‌ 9ನೇ ಸ್ಥಾನದಲ್ಲಿದ್ದರೆ, ಆಲ್ರೌಂಡರ್‌ ದೀಪ್ತಿ ಶರ್ಮಾ 7ನೇ ಸ್ಥಾನ ಪಡೆದಿದ್ದಾರೆ.