ಧೋನಿ ಭೇಟಿಯಾದ ದಾದಾ; ಐಪಿಎಲ್ ಟೂರ್ನಿಗೂ ಮುನ್ನ 'ಖಾಸ್ ಬಾತ್'..?
16ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಧೋನಿ, ಗಂಗೂಲಿ ಮಾತುಕತೆ
2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಧೋನಿ
ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವ ದಾದಾಗೆ ಈಗ ಕ್ರಿಕೆಟ್ ನಿರ್ದೇಶಕನ ಹೊಣೆ
ಚೆನ್ನೈ(ಫೆ.04): ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಈ ಇಬ್ಬರು ನಾಯಕರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಕೆಲ ತಿಂಗಳ ಹಿಂದಷ್ಟೇ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ದಾದಾ, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, "ಮಹರಾಜ, ಸೂಪರ್ ಕಿಂಗ್ ಭೇಟಿಯಾದಾಗ" ಎನ್ನುವ ಕ್ಯಾಪ್ಷ್ಯನ್ ನೀಡಿದೆ.
ಕಳೆದ ಹಲವಾರು ವರ್ಷಗಳಿಂದ ಈ ಇಬ್ಬರು ದಿಗ್ಗಜ ಆಟಗಾರರ ನಡುವೆ ಒಳ್ಳೆಯ ಬಾಂಧವ್ಯವಿದೆ. ಸ್ವತಃ ಸೌರವ್ ಗಂಗೂಲಿ, ಒಮ್ಮೆ ಧೋನಿ ಭಾರತ ಕಂಡ ಶ್ರೇಷ್ಠ ನಾಯಕ ಎಂದು ಬಣ್ಣಿಸಿದ್ದರು.
ನಿರ್ಣಯ ತೆಗೆದುಕೊಳ್ಳುವ ಗುಣವು ನಾಯಕತ್ವವನ್ನು ನಿರ್ಧರಿಸುತ್ತದೆ. ಅದನ್ನು ಮಹೆಂದ್ರ ಸಿಂಗ್ ಧೋನಿ 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮಾಡಿ ತೋರಿಸಿದ್ದರು. ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುವ ಮೂಲಕ ಸಮಯೋಚಿತ ಬ್ಯಾಟಿಂಗ್ ನಡೆಸಿ , ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅವರು ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಕಳೆದ ವರ್ಷ ಸೌರವ್ ಗಂಗೂಲಿ ಹೇಳಿದ್ದರು.
ನಾನು ಆಡುವ ಸಂದರ್ಭದಲ್ಲಿ ಕ್ರಿಕೆಟ್ ವಿಭಿನ್ನವಾಗಿತ್ತು. ಆಗ ಒಟ್ಟಾರೆ ವಿಶ್ವ ಕ್ರಿಕೆಟ್ ಭಿನ್ನವಾಗಿತ್ತು. ನಾಯಕತ್ವ ಎನ್ನುವುದು ಸಮಯ ಹಾಗೂ ಪರಿಸ್ಥಿತಿಯನ್ನು ಅವಲಂಭಿಸಿರುತ್ತದೆ. ಐಪಿಎಲ್ ಹಾಗೂ ಟಿ20 ಕ್ರಿಕೆಟ್ ಬಂದ ಬಳಿಕ ಕ್ರಿಕೆಟ್‌ನ ವಾತಾವರಣವೇ ಬದಲಾಗಿ ಹೋಯಿತು. ಎಂ ಎಸ್ ಧೋನಿ ಅವರೊಬ್ಬ ಪರ್ಫೆಕ್ಟ್ ನಾಯಕ ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದರು.
ವಿರಾಟ್ ಕೊಹ್ಲಿ ಮುಂದಿನ ಟಿ20 ವಿಶ್ವಕಪ್ ಆಡಬಹುದು ಆದ್ರೆ ರೋಹಿತ್ ಶರ್ಮಾ ಖಂಡಿತಾ ಆಡಲ್ಲ
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಐಸಿಸಿ ಟ್ರೋಫಿ ಜಯಿಸಿದ ಜಗತ್ತಿನ ಏಕೈಕ ನಾಯಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್(2007), ಐಸಿಸಿ ಏಕದಿನ ವಿಶ್ವಕಪ್(2011) ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ(2013) ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2013ರ ಬಳಿಕ ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾ ಇದುವರೆಗೂ ಐಸಿಸಿ ಟ್ರೋಫಿ ಗೆಲ್ಲಲು ಯಶಸ್ವಿಯಾಗಿಲ್ಲ. ಇನ್ನು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಎಂ ಎಸ್ ಧೋನಿ ನಾಯಕತ್ವದಡಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 4 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಸಿಎಸ್‌ಕೆ ತಂಡವು ಐದನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಐಪಿಎಲ್‌ನ ಡೆಲ್ಲಿ ತಂಡಕ್ಕೆ ದಾದಾ ಕ್ರಿಕೆಟ್ ನಿರ್ದೇಶಕ
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೊಮ್ಮೆ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಲಿದ್ದು, 2023ರ ಆವೃತ್ತಿಯಲ್ಲಿ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಿಸಿಸಿಐ ಅಧ್ಯಕ್ಷರಾಗುವ ಮೊದಲು 2019ರಲ್ಲಿ ಡೆಲ್ಲಿ ತಂಡದ ಮೆಂಟರ್ ಆಗಿದ್ದರು. ಗಂಗೂಲಿ ಫ್ರಾಂಚೈಸಿಯ ಯುಎಇ ಟಿ10, ದ.ಆಫ್ರಿಕಾ ಟಿ20 ಲೀಗ್‌ಗಳ ತಂಡಗಳ ಕ್ರಿಕೆಟ್ ಚಟುವಟಿಕೆಯ ಮೇಲುಸ್ತುವಾರಿಯನ್ನೂ ವಹಿಸಲಿದ್ದಾರೆ.