ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ದೀಪಕ್ ಹೂಡಾ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. 21 ಎಸೆತಗಳಲ್ಲಿ ಕೇವಲ 22 ರನ್ ಗಳಿಸಿದ ಹೂಡಾ, ಐಪಿಎಲ್ 2023ರಲ್ಲಿ ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಹೂಡಾ ಅವರ ಕಳಪೆ ಫಾರ್ಮ್ ಚೆನ್ನೈ ತಂಡದ ಸೋಲಿಗೆ ಕಾರಣವಾಗಿದೆ.

ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ದೀಪಕ್ ಹೂಡಾ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ದೀಪಕ್ ಹೂಡಾ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. 

ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯವನ್ನು ವಹಿಸಿತ್ತು. ಏಪ್ರಿಲ್ 25ರಂದು ನಡೆದ ಈ ಪಂದ್ಯದಲ್ಲಿ ದೀಪಕ್ ಹೂಡಾ 21 ಎಸೆತಗಳನ್ನು ಎದುರಿಸಿ ಕೇವಲ 22 ರನ್ ಗಳಿಸಲಷ್ಟೇ ಶಕ್ತವಾಯಿತು. ಇವರ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದೆ. 30 ವರ್ಷದ ಬಲಗೈ ಬ್ಯಾಟರ್ ಹೂಡಾ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: 7 ಮ್ಯಾಚ್ ಸೋತರೂ ಸಿಎಸ್‌ಕೆಗಿದೆ ಇನ್ನೂ ಇದೇ ಪ್ಲೇ ಆಫ್‌ಗೇರುವ ಲಾಸ್ಟ್‌ ಚಾನ್ಸ್! ಇಲ್ಲಿದೆ ಲೆಕ್ಕಾಚಾರ

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದೀಪಕ್ ಹೂಡಾ ನೀರಸ ಪ್ರದರ್ಶನ ಮುಂದುವರೆಸಿದ್ದಾರೆ. ಈ ಮೊದಲು ದೀಪಕ್ ಹೂಡಾ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಎದುರು ಕ್ರಮವಾಗಿ 3, 4 ಹಾಗೂ ಶೂನ್ಯ ಸಂಪಾದನೆ ಮಾಡಿದ್ದರು.

5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 1.7 ಕೋಟಿ ರುಪಾಯಿ ನೀಡಿ ದೀಪಕ್ ಹೂಡಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಸಿಎಸ್‌ಕೆ ಸೇರುವ ಮುನ್ನ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದೀಪಕ್ ಹೂಡಾ ಲಖನೌ ಸೂಪರ್ ಜೈಂಟ್ಸ್ ಪರ 9 ಇನ್ನಿಂಗ್ಸ್‌ಗಳನ್ನಾಡಿ 145 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. 

ದೀಪಕ್ ಹೂಡಾ ಇದುವರೆಗೂ 122 ಪಂದ್ಯಗಳನ್ನಾಡಿ ಕೇವಲ 17.79ರ ಬ್ಯಾಟಿಂಗ್ ಸರಾಸರಿಯಲ್ಲಿ 1494 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ನೂರಕ್ಕೂ ಹೆಚ್ಚು ಐಪಿಎಲ್ ಆಡಿದ್ದರೂ ದೀಪಕ್ ಹೂಡಾ ಕೇವಲ 8 ಅರ್ಧಶತಕ ಬಾರಿಸಲಷ್ಟೇ ಶಕ್ತರಾಗಿದ್ದಾರೆ. ದೀಪಕ್ ಹೂಡಾ ಈ ಬಾರಿ 100ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಲು ಪರದಾಡುತ್ತಿದ್ದಾರೆ.

ಇದನ್ನೂ ಓದಿ: IPL 2025: ಸಿಎಸ್‌ಕೆಗೆ ಮತ್ತೊಂದು ಸೋಲು, ಧೋನಿ ಟೀಂ ಪ್ಲೇ-ಆಫ್‌ ಕನಸು ಭಗ್ನ?

2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ 15 ಪಂದ್ಯಗಳನ್ನಾಡಿ 451 ರನ್ ಸಿಡಿಸಿ ಅಬ್ಬರಿಸಿದ್ದರು. ಇದಾದ ಬಳಿಕ ದೀಪಕ್ ಹೂಡಾ ಅವರ ಬ್ಯಾಟಿಂಗ್ ಗ್ರಾಫ್ ಇಳಿಯುತ್ತಲೇ ಸಾಗುತ್ತಿದೆ. 2023ರ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿ 93.33ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 84 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಹಾಲಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದೀಪಕ್ ಹೂಡಾ 4 ಪಂದ್ಯಗಳನ್ನಾಡಿ 74.36ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 29 ರನ್ ಗಳಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಎದುರು ಸನ್‌ರೈಸರ್ಸ್‌ ಹೈದರಾಬಾದ್ ಅನುಭವಿ ವೇಗಿ ಹರ್ಷಲ್ ಪಟೇಲ್ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು. ಹರ್ಷಲ್ ಪಟೇಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 28 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 19.5 ಓವರ್‌ಗಳಲ್ಲಿ ಕೇವಲ 154 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಹರ್ಷಲ್ ಪಟೇಲ್, ಸ್ಯಾಮ್ ಕರ್ರನ್, ಡೆವಾಲ್ಡ್ ಬ್ರೇವಿಸ್, ನಾಯಕ ಎಂ ಎಸ್ ಧೋನಿ ಹಾಗೂ ನೂರ್ ಅಹಮದ್ ಅವರನ್ನು ಔಟ್ ಮಾಡುವ ಮೂಲಕ ಸನ್‌ರೈಸರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.