2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ. ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ ಸೋತಿದ್ದು, ಭಾರತವು ಬಾಂಗ್ಲಾದೇಶವನ್ನು ಸೋಲಿಸಿದೆ. ಹವಾಮಾನವು ಸಾಮಾನ್ಯವಾಗಿರಲಿದ್ದು, ಮಳೆಯ ಸಾಧ್ಯತೆ ಕಡಿಮೆ ಇದೆ. ಪಂದ್ಯ ರದ್ದಾದರೆ, ಅಂಕಗಳನ್ನು ಹಂಚಿಕೊಳ್ಳಲಾಗುವುದು. ಸೆಮಿಫೈನಲ್ ಪ್ರವೇಶವು ಇತರ ಪಂದ್ಯಗಳ ಫಲಿತಾಂಶ ಮತ್ತು ನೆಟ್ ರನ್ ರೇಟ್ ಮೇಲೆ ನಿರ್ಧಾರವಾಗುತ್ತದೆ.

ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಭಾರತೀಯ ಕಾಲಮಾನ 2.30ಕ್ಕೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಈ ಪಂದ್ಯ ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿದೆ? 

ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ತಂಡವು ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಇದೀಗ ಭಾರತ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 8 ವರ್ಷಗಳ ಹಿಂದೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲೂ ಭಾರತವನ್ನು ಮಣಿಸಿ ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 

ಟೀಂ ಇಂಡಿಯಾ ಈ ಮೂರು ದಿಗ್ಗಜ ಕ್ರಿಕೆಟಿಗರಿಗೆ ಪಾಕ್ ಎದುರು ಇದೇ ಕೊನೆಯ ಅಂತಾರಾಷ್ಟ್ರೀಯ ಮ್ಯಾಚ್?

ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತಾನಾಡಿದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದು, ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಸೆಮೀಸ್‌ಗೆ ಲಗ್ಗೆಯಿಡುವ ಲೆಕ್ಕಾಚಾರದಲ್ಲಿದೆ. ಇನ್ನು 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಲೆಕ್ಕ ಚುಕ್ತಾ ಮಾಡಲು ರೋಹಿತ್ ಪಡೆ ಸಜ್ಜಾಗಿದೆ.

ಹವಮಾನ ವರದಿ ಏನು?

ಫೆಬ್ರವರಿ 23ರಂದು ದುಬೈನಲ್ಲಿ ವಾತಾವರಣ ಸಾಮಾನ್ಯವಾಗಿ ಇರುತ್ತದೆ. ಮ್ಯಾಚ್ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಹಾಗಾಗಿ ಮ್ಯಾಚ್‌ಗೆ ಎಲ್ಲಿಯೂ ತೊಂದರೆಯಾಗುವ ಸಾಧ್ಯತೆ ಇರುವುದಿಲ್ಲ. ಅಭಿಮಾನಿಗಳು ಪೂರ್ತಿ ಮ್ಯಾಚ್ ನೋಡಬಹುದು. ಭಾನುವಾರ ದುಬೈನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಕೊಂಚ ಮೋಡಗಳು ಕೂಡ ಇರಬಹುದು. ಗಂಟೆಗೆ 30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ. ಸಂಜೆ ವೇಳೆಯಲ್ಲಿ ಕೊಂಚ ಮಂಜು ಬೀಳಬಹುದು. ಹಾಗಾಗಿ ಇದು ಕೂಡ ಮ್ಯಾಚ್ ಮೇಲೆ ಪರಿಣಾಮ ಬೀರುವ ಚಾನ್ಸ್ ಇರುತ್ತದೆ. ಒಂದು ವೇಳೆ ಯಾವುದಾದರೂ ಅಡಚಣೆಯಿಂದ ಪಂದ್ಯ ರದ್ದಾದರೇ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ.

ಭಾರತ ಎದುರು ಸೋತರೂ ಪಾಕಿಸ್ತಾನಕ್ಕಿದೆ ಸೆಮೀಸ್‌ಗೇರುವ ಚಾನ್ಸ್! ಇಲ್ಲಿದೆ ನಾಕೌಟ್ ಲೆಕ್ಕಾಚಾರ

ಒಂದು ವೇಳೆ ಇಂದಿನ ಪಂದ್ಯ ರದ್ದಾದ್ರೆ ಸೆಮೀಸ್ ಲೆಕ್ಕಾಚಾರ ಹೇಗಿರಲಿದೆ?

1. ನ್ಯೂಜಿಲೆಂಡ್ ಭಾರತ ಹಾಗೂ ಬಾಂಗ್ಲಾ ಎದುರು ಗೆದ್ದರೆ, & ಪಾಕ್ ಬಾಂಗ್ಲಾದೇಶ ಎದುರು ಗೆದ್ದರೆ?
ಆಗ
* ಭಾರತ ಹಾಗೂ ಪಾಕಿಸ್ತಾನ ಬಳಿ ತಲಾ 3 ಅಂಕಗಳು ಉಳಿಯಲಿವೆ
* ಭಾರತ-ಪಾಕ್ ನಡುವೆ ಯಾವ ತಂಡದ ನೆಟ್‌ ರನ್‌ರೇಟ್ ಉತ್ತಮವಾಗಿರತ್ತೋ ಆ ತಂಡ ನ್ಯೂಜಿಲೆಂಡ್ ಜತೆಗೆ ಸೆಮೀಸ್‌ಗೇರಲಿದೆ.

2. ನ್ಯೂಜಿಲೆಂಡ್, ಭಾರತ ಹಾಗೂ ಬಾಂಗ್ಲಾ ಎದುರು ಸೋತರೇ & ಪಾಕ್ ಬಾಂಗ್ಲಾದೇಶ ಎದುರು ಗೆದ್ದರೆ?

ಆಗ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್‌ಗೆ ಎಂಟ್ರಿ ಕೊಡಲಿವೆ.

3. ನ್ಯೂಜಿಲೆಂಡ್ ಬಾಂಗ್ಲಾದೇಶ ಎದುರು ಗೆದ್ದ, ಭಾರತ ಎದುರು ಸೋತರೇ & ಬಾಂಗ್ಲಾ ಎದುರು ಪಾಕ್ ಗೆದ್ದರೇ?

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ತಲಾ 4 ಅಂಕಗಳೊಂದಿಗೆ ಸೆಮೀಸ್‌ಗೇರಲಿದೆ.