2025-26ರ ರಣಜಿ ಟ್ರೋಫಿ ಫೈನಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಪ್ರತಿಯಾಗಿ, ಪ್ರಸಿದ್ದ್ ಕೃಷ್ಣ ಅವರ ಐದು ವಿಕೆಟ್‌ಗಳ ಸಾಧನೆಯ ನಂತರ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿದೆ.

ಹುಬ್ಬಳ್ಳಿ: 2025-26ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಎದುರು ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು 584 ರನ್‌ಗಳಿಗೆ ಸರ್ವಪತನ ಕಂಡಿದೆ. ಇದಾದ ಬಳಿಕ ಕರ್ನಾಟಕ ತಂಡವು ಎಚ್ಚರಿಕೆಯ ಆರಂಭವನ್ನು ಪಡೆದಿದೆ.

Add Asianetnews Kannada as a Preferred SourcegooglePreferred

ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 527 ರನ್ ಬಾರಿಸಿತ್ತು. ಆದರೆ ಮೂರನೇ ದಿನದಾಟದಲ್ಲಿ ಮಾರಕ ದಾಳಿ ಸಂಘಟಿಸಿದ ಕರ್ನಾಟಕ ತಂಡವು, ಎದುರಾಳಿ ಪಡೆಯನ್ನು 584 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ.

ಜಮ್ಮು & ಕಾಶ್ಮೀರ ಬ್ಯಾಟರ್‌ಗಳಿಂದ ಸಂಘಟಿತ ಪ್ರದರ್ಶನ

ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಶುಭಂ ಪುಂಡಿರ್ ಶತಕ ಸಿಡಿಸಿದರೆ(121), ಆರಂಭಿಕ ಬ್ಯಾಟರ್ ಯಶ್ವೀರ್ ಹಸನ್(88), ನಾಯಕ ಪರಾಸ್ ದೋಗ್ರಾ(70), ಅಬ್ದುಲ್ ಸಮದ್(61), ವಿಕೆಟ್ ಕೀಪರ್ ಬ್ಯಾಟರ್ ಕನ್ನಯ್ಯ ವಧ್ವಾನ್(70) ಹಾಗೂ ಸಾಹಿಲ್ ಲೋಥ್ರಾ ಆಕರ್ಷಕ 72 ರನ್ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಕರ್ನಾಟಕ ತಂಡದ ಪರ ಅನುಭವಿ ವೇಗಿ ಪ್ರಸಿದ್ದ್ ಕೃಷ್ಣ 98 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಇನ್ನುಳಿದಂತೆ ಶಿಖರ್ ಶೆಟ್ಟಿ, ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ್ ಹಾಗೂ ವೈಶಾಕ್ ವಿಜಯ್‌ಕುಮಾರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಎಚ್ಚರಿಕೆಯ ಆರಂಭ ಪಡೆದ ಕರ್ನಾಟಕ

ಇನ್ನು ಸವಾಲಿನ ಗುರಿ ಬೆನ್ನತ್ತಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು ಎಚ್ಚರಿಕೆಯ ಆರಂಭ ಪಡೆದಿದೆ. ಟೀಂ ಇಂಡಿಯಾ ಕ್ರಿಕೆಟಿಗರಾದ ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಆರಂಭಿಕರಾಗಿ ರಾಜ್ಯ ತಂಡದ ಪರ ಕಣಕ್ಕಿಳಿದಿದ್ದು, ಮೊದಲ 11 ಓವರ್ ಅಂತ್ಯದ ವೇಳೆಗೆ 27 ರನ್ ಕಲೆಹಾಕಿದೆ. ಕೆ ಎಲ್ ರಾಹುಲ್(13) ಹಾಗೂ ಮಯಾಂಕ್ ಅಗರ್‌ವಾಲ್ 12 ರನ್ ಗಳಿಸಿ ಕ್ರೀಸ್‌ನಲ್ಲಿದ್ದು, ಕರ್ನಾಟಕ ತಂಡವು ಇನ್ನೂ 557 ರನ್‌ಗಳ ಹಿನ್ನಡೆಯಲ್ಲಿದೆ.