ಸೆಂಟ್ರಲ್ ಲಯನ್ಸ್‌ಗೆ ಒಲಿದ ಅಡ್ವೊಕೇಟ್ ಜನರಲ್ ಕಪ್
ಭಾನುವಾರ ‘ಅಡ್ವೊಕೇಟ್ ಜನರಲ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ’ಯಲ್ಲಿ ಸೆಂಟ್ರಲ್ ಲಯನ್ಸ್ ತಂಡವು ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇನ್ನು ಹೈಕೋರ್ಟ್ ವರದಿಗಾರರ ‘ಫೋರ್ತ್ ಪಿಲ್ಲರ್ಸ್’ ತಂಡವು ರನ್ನರ್ ಅಪ್ ಟ್ರೋಫಿಗೆ ತೃಪ್ತಿಪಟ್ಟುಕೊಂಡಿದ್ದು, ಫೋರ್ತ್ ಪಿಲ್ಲರ್ಸ್’ ತಂಡದ ವೆಂಕಟೇಶ್ ಕಲಿಪಿ ಹಾಗೂ ನವೀನ್ ಕೊಡಸೆ ಕ್ರಮವಾಗಿ ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಬೆಂಗಳೂರು[ಡಿ.09]: ನ್ಯಾಯಸ್ಥಾನವು ವಕೀಲರ ಮಾನಸಿಕ ಸದೃಢತೆಯನ್ನು ಪರೀಕ್ಷಿಸಿದರೆ, ಕ್ರೀಡಾ ಮೈದಾನವು ದೈಹಿಕ ಸದೃಢತೆಯನ್ನು ಪರೀಕ್ಷಿಸುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅಭಿಪ್ರಾಯಪಟ್ಟರು. ಸದಾ ಒತ್ತಡದಲ್ಲಿರುವ ವಕೀಲರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ, ಅವರ ಮಾನಸಿಕ ಸದೃಢತೆಯ ಜತೆಗೆ ದೈಹಿಕ ಸ್ಥಿತಿಗತಿಯೂ ಸದೃಢವಾಗಲಿದೆ ಎಂದು ಹೇಳಿದರು.
ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ತಮಿಳುನಾಡು ಸವಾಲು
ನಗರದ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಅಡ್ವೊಕೇಟ್ ಜನರಲ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ’ಯಲ್ಲಿ ವಿಜೇತರಿಗೆ ಟ್ರೋಫಿ ಪ್ರದಾನ ಮಾಡಿ ಮಾತನಾಡಿದರು. ಕೇಂದ್ರ ಸರ್ಕಾರಿ ವಕೀಲರ ’ಸೆಂಟ್ರಲ್ ಲಯನ್ಸ್’ ತಂಡ ರಾಜ್ಯ ಅಡ್ವೋಕೇಟ್ ಜನರಲ್ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹೈಕೋರ್ಟ್ ವರದಿಗಾರರ ‘ಫೋರ್ತ್ ಪಿಲ್ಲರ್ಸ್’ ತಂಡವು ರನ್ನರ್ ಅಪ್ ಟ್ರೋಫಿಗೆ ತೃಪ್ತಿಪಟ್ಟಿತು.
ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಮಾತನಾಡಿ, ಕ್ರಿಕೆಟ್ ಇದೀಗ ಬರೀ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಧರ್ಮವಾಗಿದೆ. ಧರ್ಮ, ಜಾತಿಯ ತಾರತಮ್ಯವಿಲ್ಲದೇ ಎಲ್ಲರನ್ನು ಒಂದುಗೂಡಿಸುವ ಒಂದು ಕ್ರೀಡೆಯಿದ್ದರೆ ಅದು ಕ್ರಿಕೆಟ್ ಮಾತ್ರ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಸರಣಿ ಶ್ರೇಷ್ಠ ಆಟಗಾರ ಪುರಸ್ಕಾರಕ್ಕೆ ‘ಕನ್ನಡಪ್ರಭ’ದ ಹಿರಿಯ ವರದಿಗಾರ ವೆಂಕಟೇಶ ಕಲಿಪಿ ಮತ್ತು ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಆಟಗಾರ ಪುರಸ್ಕಾರಕ್ಕೆ ಸುವರ್ಣ ನ್ಯೂಸ್.ಕಾಂ ಹಿರಿಯ ಉಪಸಂಪಾದಕ ನವೀನ್ ಕೊಡಸೆ ಪಾತ್ರರಾದರು.
ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪುರಷ್ಕೃತರು:
[ಚಿತ್ರದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಕೇಂದ್ರ ಸರ್ಕಾರದ ಸೆಂಟ್ರಲ್ ಲಯನ್ಸ್ ವಕೀಲರ ತಂಡದ ನಾಯಕ ಸಹಾಯಕ ಸಾಲಿಸಿಟರ್ ಜನರಲ್ ಸಿ. ಶಶಿಕಾಂತ, ವರದಿಗಾರರ ತಂಡದ ನಾಯಕ ಎಂ.ರಮೇಶ್, ಕ್ರೀಡಾ ಆಯೋಜಕರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರಸನ್ನ ದೇಶಪಾಂಡೆ ಹಾಗೂ ಟ್ರೋಫಿ ಗೆದ್ದ ಹಾಗೂ ರನ್ನರ್ ಅಪ್ ತಂಡದ ಆಟಗಾರರು ಚಿತ್ರದಲ್ಲಿ ಇದ್ದಾರೆ. ]