ನವದೆಹಲಿ(ನ.09): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಟೀಂ ಇಂಡಿಯಾ ಮೂರು ತಿಂಗಳ ದೀರ್ಘಕಾಲಿಕ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದೆ. ಇದರ ನಡುವೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ. ವಿರಾಟ್‌ಗೆ ಬಿಸಿಸಿಐ ಪಿತೃತ್ವ ರಜೆ ನೀಡಿದೆ.

2021ರ ವರ್ಷಾರಂಭದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ 4 ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಕೊಹ್ಲಿ ಕೇವಲ ಒಂದು ಪಂದ್ಯವನ್ನಾಡಲಿದ್ದು, ಇನ್ನುಳಿದ ಮೂರು ಟೆಸ್ಟ್‌ ಪಂದ್ಯಗಳಿಂದ ವಂಚಿತರಾಗಲಿದ್ದಾರೆ.  

ಇನ್ನು ಐಪಿಎಲ್ ಟೂರ್ನಿಯ ವೇಳೆ ಗಾಯಕ್ಕೆ ತುತ್ತಾಗಿರುವ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್‌ಗಳ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಟೆಸ್ಟ್ ಸರಣಿಗೆ ಹಿಟ್‌ಮ್ಯಾನ್ ತಂಡ ಕೂಡಿಕೊಳ್ಳಲಿದ್ದಾರೆ. ಇನ್ನು ಏಕದಿನ ತಂಡಕ್ಕೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಆಸೀಸ್ ಪ್ರವಾಸಕ್ಕೆ ವೃದ್ದಿಮಾನ್ ಸಾಹ ಅನುಮಾನ..!

ಕೊರೋನಾ ಹಾವಳಿ ಹಾಗೂ ಲಾಕ್‌ಡೌನ್ ಬಳಿಕ ಟೀಂ ಇಂಡಿಯಾ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಸರಣಿ ಇದಾಗಿದ್ದು, ಈಗಾಗಲೇ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇನ್ನುಳಿದಂತೆ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆದಿದ್ದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಭುಜದ ನೋವಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ತಂಡ ಕೂಡಿಕೊಂಡಿದ್ದಾರೆ.

ಭಾರತ ತಂಡವು ನವೆಂಬರ್ 27ರಿಂದ ಜನವರಿ 19ರವರೆಗೆ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ಸರಣಿಯಾಡಲಿದ್ದು, ಈ ವೇಳೆ 3 ಪಂದ್ಯಗಳ ಏಕದಿನ ಸರಣಿ, ಆ ಬಳಿಕ 3 ಪಂದ್ಯಗಳ ಟಿ20 ಸರಣಿ ಹಾಗೂ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯಾಡಲಿದೆ. ಅಂದಹಾಗೆ ಡಿಸೆಂಬರ್ 17ರಿಂದ 21ರವರೆಗೆ ಅಡಿಲೇಡ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವು ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿರಲಿದ್ದು, ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲಿದೆ.