ನವದೆಹಲಿ(ನ.09): ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ವೃದ್ದಿಮಾನ್ ಸಾಹ ಮತ್ತೊಂದು ಮಹತ್ವದ ವಿದೇಶಿ ಪ್ರವಾಸದಿಂದ ವಂಚಿತರಾಗುವ ಸಾಧ್ಯತೆಯಿದೆ. ಹೌದು, ಮಂಡಿನೋವಿಗೆ ತುತ್ತಾಗಿರುವ ವೃದ್ದಿಮಾನ್ ಸಾಹ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬೀಳುವ ಸಾಧ್ಯತೆಯಿದೆ.
 
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ದೀರ್ಘಕಾಲಿಕ ಅಸ್ಟ್ರೇಲಿಯಾ ಪ್ರವಾಸದಲ್ಲಿ 3 ಏಕದಿನ, 3 ಟಿ20 ಹಾಗೂ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ. ಡಿಸೆಂಬರ್ 17ರಂದು ಅಡಿಲೇಟ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ನವೆಂಬರ್ 03ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಲೀಗ್‌ ಹಂತದ ಕೊನೆಯ ಪಂದ್ಯದ ಬಳಿಕ ಸಾಹ ಗಾಯದ ಸಮಸ್ಯೆಗೆ ತುತ್ತಾಗಿ ವಿಶ್ರಾಂತಿಗೆ ಜಾರಿದ್ದಾರೆ. ಹೀಗಾಗಿ ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಿಂದಲೂ ಸಾಹ ಹೈದಾರಾಬಾದ್ ತಂಡದಿಂದ ಹೊರಗುಳಿದಿದ್ದರು.

IPL 2020: ಈ ಬಾರಿ‌ ಪ್ರಶಸ್ತಿ ರೇಸಿನಿಂದ ಸನ್‌ರೈಸರ್ಸ್ ಹೈದರಾಬಾದ್ ಮುಗ್ಗರಿಸಿದ್ದೆಲ್ಲಿ..?

ವೃದ್ದಿಮಾನ್ ಸಾಹ ಗಾಯಕ್ಕೆ ತುತ್ತಾಗಿ ಒಂದು ವಾರವೇ ಕಳೆದಿದ್ದರೂ, ಅವರ ಗಾಯದ ಸ್ವರೂಪದ ಬಗ್ಗೆ ಇದುವರೆಗೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹೀಗಾಗಿ ಸಾಹ ಆದಷ್ಟು ಬೇಗ ಗಾಯದಿಂದ ಚೇತರಿಕೊಂಡು ಆಸೀಸ್ ಪ್ಲೈಟ್ ಏರುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.