ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಆ ಹುಡುನ ಯಶಸ್ಸಿನ ಹಿಂದೆ ತಂದೆಯ ನನಸಾಗದ ಕನಸು ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಸ್ಪೂರ್ತಿದಾಯಕ ಕಥೆಯಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಕ್ರಿಕೆಟ್ ಎಂದರೆ ಕೇವಲ ಸ್ಕೋರ್‌ಬೋರ್ಡ್‌ನಲ್ಲಿ ಕಾಣಿಸುವ ರನ್, ವಿಕೆಟ್ ಹಾಗೂ ದಾಖಲೆಗಳ ಅಂಕಿ-ಅಂಶಗಳಷ್ಟೇ ಅಲ್ಲ. ಈ ಆಟದ ಪ್ರತಿ ಇನಿಂಗ್ಸ್‌ ಹಿಂದೆಯೂ ಕಣ್ಣೀರು, ತ್ಯಾಗ ಮತ್ತು ಬೆವರ ಹನಿಗಳ ದೊಡ್ಡ ಕಥೆಯಿರುತ್ತದೆ. ಬೌಲಿಂಗ್ ಮತ್ತು ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಇಲ್ಲಿ ಭಾವನೆಗಳೇ ಗೆಲ್ಲುತ್ತವೆ. ಭಾರತದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಆ ಆಫ್-ಸ್ಪಿನ್ನರ್ ಹಾಗೂ ಕೆಳಕ್ರಮಾಂಕದ ಉಪಯುಕ್ತ ಬ್ಯಾಟರ್ ಬದುಕಿನ ಕಥೆಯೇ ಇದಕ್ಕೆ ಸಾಕ್ಷಿಯಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಸರಾಂಶ್ ಸಾಧನೆಯ ಹಿಂದೆ, ತಂದೆಯ ನನಸಾಗದ ಕನಸು, ಕ್ಯಾನ್ಸರ್ ವಿರುದ್ಧದ ಕ್ರೂರ ಹೋರಾಟ ಹಾಗೂ ಮಗನ ಅಚಲವಾದ ಕ್ರಿಕೆಟಿಂಗ್ ಸ್ಪೂರ್ತಿಯಿದೆ.

ಸಾರಾಂಶಗೆ ತಿಳಿಯದ ಸತ್ಯ!

ವರ್ಷ 2014. ಆಗ 21 ವರ್ಷದ ಯುವ ಆಟಗಾರ ಸರಾಂಶ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ಭಾರತೀಯ ಕ್ರಿಕೆಟ್‌ನ ಆಂತರಿಕ ಆಟಗಳಲ್ಲಿ ತನ್ನ ಭವಿಷ್ಯವನ್ನು ಕಂಡುಕೊಳ್ಳಲು ಶ್ರಮಿಸುತ್ತಿದ್ದ ಅವರು, ಬಿಡುವಿನ ವೇಳೆಯಲ್ಲಿ ಮನೆಗೆ ಕರೆ ಮಾಡುತ್ತಿದ್ದರು. ಆಗೆಲ್ಲಾ 'ಅಪ್ಪ ಕೆಲಸದಲ್ಲಿ ನಿರತರಾಗಿದ್ದಾರೆ' ಎಂದೇ ತಾಯಿ ಮತ್ತು ಅಣ್ಣ ಹೇಳುತ್ತಿದ್ದರು. ಆದರೆ, ಸರಾಂಶ್ ಅವರ ಮೊದಲ ಕೋಚ್, ಅವರ ದಿಕ್ಸೂಚಿ ಹಾಗೂ ಆಟಕ್ಕೆ ದೊಡ್ಡ ಪ್ರೇರಣೆಯಾಗಿದ್ದ ತಂದೆ ಸುಬೋಧ್ ಜೈನ್, ತಮ್ಮ ಜೀವನದ ಅತ್ಯಂತ ಕಠಿಣವಾದ ಬ್ರೈನ್/ಬಾಯಿ ಕ್ಯಾನ್ಸರ್ ಜೊತೆ ಯುದ್ಧ ಮಾಡುತ್ತಿದ್ದಾರೆ ಎಂಬ ಸತ್ಯ ಯುವ ಆಟಗಾರನಿಗೆ ತಿಳಿದಿರಲಿಲ್ಲ.

ಸಾರಾಂಶ್‌ಗೆ ಎದುರಾಗಿತ್ತು ಬಿಗ್ ಶಾಕ್‌!

ಪ್ರವಾಸ ಮುಗಿಸಿ ಮನೆಗೆ ಬಂದಾಗ ಸರಾಂಶ್ ಕಂಡದ್ದು ಎದೆ ನಡುಗಿಸುವ ದೃಶ್ಯ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದಾಗಿ ತಂದೆಯ ಮುಖ ಊದಿಕೊಂಡಿತ್ತು, ಧ್ವನಿ ಸಂಪೂರ್ಣವಾಗಿ ಉರಿದು ಹೋಗಿತ್ತು. ಮಾತನಾಡಲು ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದ ಅಪ್ಪನನ್ನು ನೋಡಿ ಸರಾಂಶ್ ಕಣ್ಣೀರು ಹಾಕಿದರು. ಆದರೆ, ಧ್ವನಿ ಕಳೆದುಕೊಂಡಿದ್ದ ತಂದೆ ಸುಬೋಧ್ ಅವರು ಒಂದು ಸಣ್ಣ ಕಾಗದದ ಚೀಟಿಯಲ್ಲಿ ಸಾಲು ಬರೆದು ಮಗನ ಕೈಗಿಟ್ಟರು. ಆ ಚೀಟಿಯಲ್ಲಿದ್ದ ಆ ಒಂದು ಮಾತು, ಸರಾಂಶ್ ಜೀವನದ ದಿಕ್ಕನ್ನೇ ಬದಲಿಸಿತು!

ಎಂಪಿ ಪರ ರಣಜಿ ಆಟ!

ಮಧ್ಯಪ್ರದೇಶದ ಪರ ರಣಜಿ ಟ್ರೋಫಿ ಆಡಿದ್ದರೂ, ದೇಶಕ್ಕಾಗಿ (Team India) ಆಡಲಾಗದ ಕೊರಗು ತಂದೆ ಸುಬೋಧ್ ಅವರಿಗಿತ್ತು. ತಂದೆಯ ಆ ನನಸಾಗದ ಕನಸನ್ನು ಸಾಕಾರಗೊಳಿಸಲು ಸರಾಂಶ್ ಮೈದಾನದಲ್ಲಿ ರಕ್ತ-ಬೆವರು ಹರಿಸಲು ಶುರು ಮಾಡಿದರು. ಆದರೆ, ಭಾರತೀಯ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸರಾಂಶ್ ಹಾದಿ ಸುಲಭವಾಗಿರಲಿಲ್ಲ. ರಣಜಿ ಡೆಬ್ಯೂ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದರೂ ಸಹ, ಮುಂದಿನ ಪಂದ್ಯಗಳಲ್ಲಿ ಅವರನ್ನು ತಂಡದಿಂದ ಡ್ರಾಪ್ ಮಾಡಲಾಯಿತು. ಸಾಮಾನ್ಯ ಆಟಗಾರರಾಗಿದ್ದರೆ ಇಲ್ಲಿಗೆ ಭರವಸೆ ಕಳೆದುಕೊಳ್ಳುತ್ತಿದ್ದರು. ಆದರೆ ಸರಾಂಶ್ ಹಿಂಜರಿಯಲಿಲ್ಲ.

ಪಸ್ಟ್‌ ಕ್ಲಾಸ್‌ ಕ್ರಿಕೆಟ್‌ನಲ್ಲಿ ಮಿಂಚಿದ ಸಾರಾಂಶ!

ತಮ್ಮ ಬೌಲಿಂಗ್‌ನಲ್ಲಿ ವೇರಿಯೇಷನ್‌ಗಳನ್ನು ಹೆಚ್ಚಿಸಿಕೊಂಡರು. ಫ್ಲೈಟ್, ಡ್ರಿಫ್ಟ್ ಹಾಗೂ ಸೀಮ್ ಪೊಸಿಷನ್ ಮೇಲಿನ ನಿಯಂತ್ರಣದಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಲು ಸಾಲು ವಿಕೆಟ್‌ಗಳನ್ನು ಕಬಳಿಸಿದರು. ದುಲೀಪ್ ಟ್ರೋಫಿಯಲ್ಲಿ 16 ವಿಕೆಟ್, ಇರಾನಿ ಕಪ್‌ನಲ್ಲಿ ಮ್ಯಾಚ್-ವಿನ್ನಿಂಗ್ ಸ್ಪೆಲ್ ಹಾಗೂ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಆಲ್‌ರೌಂಡರ್ ಪಾತ್ರ ವಹಿಸಿದರು. ಕೇವಲ ಬೌಲಿಂಗ್ ಮಾತ್ರವಲ್ಲದೆ, ಕೆಳಕ್ರಮಾಂಕದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು.

ವೈಟ್‌ ಜೆರ್ಸಿ ದರಿಸಲಿರುವ ಸಾರಾಂಶ!

ಈ ಸತತ ಪ್ರದರ್ಶನವನ್ನು ಗಮನಿಸಿದ ಬಿಸಿಸಿಐ ಆಯ್ಕೆಗಾರರು ಮಂಗಳವಾರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸರಾಂಶ್ ಜೈನ್ ಅವರನ್ನು ಆಯ್ಕೆ ಮಾಡಿದರು. 12 ವರ್ಷಗಳ ನಿರಂತರ ಶ್ರಮ ಹಾಗೂ ತಂದೆ ಅಂದು ಬರೆದುಕೊಟ್ಟ ಆ ಒಂದು ಶಕ್ತಿಯುತ ಸಾಲು ಕೊನೆಗೂ ನಿಜವಾಯಿತು. ಇಂದು ಸರಾಂಶ್ ಜೈನ್ ಭಾರತದ ವೈಟ್ ಜೆರ್ಸಿ ಧರಿಸಿ, ಟೆಸ್ಟ್ ಕ್ಯಾಪ್ (Test Cap) ಧರಿಸಿ ಮೈದಾನಕ್ಕೆ ಕಾಲಿಡುತ್ತಿರುವಾಗ, ಅದು ಕೇವಲ ಒಬ್ಬ ಆಟಗಾರನ ವೈಯಕ್ತಿಕ ಮೈಲಿಗಲ್ಲಷ್ಟೇ ಅಲ್ಲ. ಅದು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮಾತನ್ನೇ ಕಳೆದುಕೊಂಡರೂ, ಮಗನ ಆತ್ಮವಿಶ್ವಾಸವನ್ನು ಕೊನೆವರೆಗೂ ಕುಗ್ಗಲು ಬಿಡದ ಒಬ್ಬ ಕನಸುಗಾರ ತಂದೆಗೆ ಸಿಕ್ಕ ನೈಜ ವಿಜಯವಾಗಿದೆ.