2025ರ ಏಷ್ಯಾಕಪ್ ಫೈನಲ್‌ನಲ್ಲಿ, ಜಸ್ಪ್ರೀತ್ ಬುಮ್ರಾ ಮಾರಕ ಯಾರ್ಕರ್ ಮೂಲಕ ಹ್ಯಾರಿಸ್ ರೌಫ್ ವಿಕೆಟ್ ಪಡೆದರು. ಈ ಹಿಂದೆ ಭಾರತೀಯ ಅಭಿಮಾನಿಗಳನ್ನು ಅಣಕಿಸಿದ್ದ ರೌಫ್‌ಗೆ, ಬುಮ್ರಾ 'ಜೆಟ್ ಪತನ'ದ ಆಕ್ಷನ್ ಮೂಲಕವೇ ತಿರುಗೇಟು ನೀಡಿದ್ದಾರೆ.
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯವು ಭರ್ಜರಿಯಾಗಿ ಸಾಗುತ್ತಿದೆ. ಭಾರತ ತಂಡದ ಬೌಲರ್‌ಗಳ ನಿರ್ಣಾಯಕ ಹಂತದಲ್ಲಿ ಮಾರಕ ದಾಳಿ ನಡೆಸುವ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದದ್ದು, ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ. ಏಷ್ಯಾಕಪ್ ಫೈನಲ್‌ನಲ್ಲಿ ಬುಮ್ರಾ ಪಾಕಿಸ್ತಾನ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಕರಾರುವಕ್ಕಾದ ಯಾರ್ಕರ್ ಹಾಕಿ ಕ್ಲೀನ್ ಬೌಲ್ಡ್ ಮಾಡಿದರು. ಇದಾದ ಬಳಿಕ ಬುಮ್ರಾ ಮಾಡಿದ ಆ ಒಂದು ಸೆಲಿಬ್ರೇಷನ್ ಟೀಂ ಇಂಡಿಯಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಮೊದಲು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ರೌಫ್
ಹ್ಯಾರಿಸ್ ರೌಫ್ ವಿಕೆಟ್ ಪಡೆಯುತ್ತಿದ್ದಂತೆಯೇ ಜಸ್ಪ್ರೀತ್ ಬುಮ್ರಾ, ಜೆಟ್ ಪತನದ ಆಕ್ಷನ್ ಮಾಡುವ ಮೂಲಕ ಪಾಕ್ ವೇಗಿಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆಗ ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಹ್ಯಾರಿಸ್ ರೌಫ್ ಅವರನ್ನು ಭಾರತೀಯ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಕೂಗುತ್ತಿದ್ದರು. ಆಗ ರೌಫ್ ಅಭಿಮಾನಿಗಳ ಕಡೆ ತಿರುಗಿ ಫೈಟರ್ ಜೆಟ್ ಕ್ರ್ಯಾಷ್ ಆಗುವ ರೀತಿಯ ಆಕ್ಟ್ ಮಾಡಿದ್ದರು. ಈ ತಪ್ಪಿಗೆ ವೇಗಿ ಹ್ಯಾರಿಸ್ ರೌಫ್‌ಗೆ ಪಂದ್ಯದ ಸಂಭಾವನೆಯ 30% ದಂಡ ವಿಧಿಸಲಾಗಿತ್ತು.
ಇದೀಗ ನೆಟ್ಟಿಗರು ಹ್ಯಾರಿಸ್ ರೌಫ್ ಜೆಟ್ ದುಬೈನಲ್ಲಿ ಪತನವಾಗಿದೆ. ಬುಮ್ರಾ ಯಾವ ಬಾಕಿಯನ್ನು ಇಟ್ಟುಕೊಳ್ಳುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಪಾಕ್ ವೇಗದ ಆಟಕ್ಕೆ ಬ್ರೇಕ್ ಹಾಕಿದ ಟೀಂ ಇಂಡಿಯಾ ಬೌಲರ್ಸ್!
2025ರ ಏಷ್ಯಾಕಪ್ ಫೈನಲ್‌ನಲ್ಲಿ ಟಾಸ್ ಸೋತ ಪಾಕಿಸ್ತಾನ ತಂಡವು ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಪಾಕಿಸ್ತಾನ ತಂಡವು ವಿಸ್ಪೋಟಕ ಆರಂಭವನ್ನೇ ಪಡೆಯಿತು. ಒಂದು ಹಂತದಲ್ಲಿ ಪಾಕಿಸ್ತಾನ ತಂಡವು ಕೇವಲ ಒಂದುಯ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ಆದರೆ ಇದಾದ ಬಳಿಕ ಪಂದ್ಯದಲ್ಲಿ ಭಾರತ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಯಿತು. 113 ರನ್‌ಗಳಿಂದ 146 ರನ್ ಗಳಿಸುವಷ್ಟರಲ್ಲಿ ಪಾಕಿಸ್ತಾನ ತಂಡವು ಉಳಿದ ಒಂಬತ್ತು ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಮಾರಕ ದಾಳಿ ನಡೆಸಿದ ಕುಲ್ದೀಪ್ ಯಾದವ್ 4 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಬಳಿಸಿದರು. ಟೀಂ ಇಂಡಿಯಾ ಪರ ಸ್ಪಿನ್ನರ್‌ಗಳು 8 ವಿಕೆಟ್ ಪಡೆದರೆ, ವೇಗಿ ಬುಮ್ರಾ ಎರಡು ವಿಕೆಟ್ ಪಡೆದರು.
