ಹೈದ್ರಾಬಾದ್(ಡಿ.31): ಭಾರತದಲ್ಲಿ ಕ್ರಿಕೆಟ್‌ ಆಟವನ್ನು ಒಂದು ಧರ್ಮದಂತೆ ಆರಾಧಿಸುವ ವರ್ಗವೇ ಇದೆ. ಯಾವುದೇ ಕ್ರಿಕೆಟ್‌ಗೆ ಜಾತಿ, ಧರ್ಮ, ಗಡಿಯ ಹಂಗಿಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಹೀಗಿದ್ದೂ ದಕ್ಷಿಣ ಭಾರತದಲ್ಲಿ ಒಂದು ಜಾತಿಯವರಿಗಾಗಿ ಕ್ರಿಕೆಟ್‌ ಟೂರ್ನಿ ನಡೆಸಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಹೈದ್ರಾಬಾದಿನ ನಾಗೋಳೆ ಸಮೀಪದ ಬಂಡಾಲಗುಡದ ಬಿಎಸ್‌ಆರ್‌ ಸ್ಟೇಡಿಯಂನಲ್ಲಿ ಬ್ರಾಹ್ಮಣ ಸಮುದಾಯದವರಿಗಾಗಿಯೇ ಬ್ರಾಹ್ಮಣ ಕ್ರಿಕೆಟ್‌ ಟೂರ್ನಮೆಂಟ್ ಆಯೋಜಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಟೂರ್ನಿಗೆ ಸಂಬಂಧಿಸಿದಂತೆ ಪೋಸ್ಟರ್‌ವೊಂದು ವೈರಲ್‌ ಆಗುತ್ತಿದ್ದು, ಆ ಪೋಸ್ಟರ್‌ನಲ್ಲಿ ಗುರುತಿನ ಚೀಟಿ ಹಾಗೂ ಬೇರೆ ಜಾತಿಯವರು ಈ ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನಿಯಮ ವಿಧಿಸಲಾಗಿದೆ.

ಈ ಪೋಸ್ಟರ್‌ನಲ್ಲಿ ಪಂದ್ಯಾವಳಿಯ ದಿನಾಂಕ 25 ಮತ್ತು 26 ಎಂದು ನಮೂದಿಸಲಾಗಿದ್ದು, ಅದರರ್ಥ ಕ್ರಿಸ್ಮಸ್‌ ಹಾಗೂ ಬಾಕ್ಸಿಂಗ್ ಡೇ ದಿನದಂದು ನಡೆದಿದೆ. ಸ್ಥಳೀಯ ಚುನಾಯಿತ ಸಂಸ್ಥೆ ಈ ಟೂರ್ನಿಯನ್ನು ನಡೆಸಿದೆ ಎಂದು ವರದಿಯಾಗಿದೆ. 

ಟೆಸ್ಟ್‌ ಚಾಂಪಿಯನ್‌ಶಿಪ್‌: 2ನೇ ಸ್ಥಾನ ಕಾಯ್ದುಕೊಂಡ ಭಾರತ

ದೇಶ ಬ್ರಿಟೀಷರಿಂದ ಸ್ವತಂತ್ರಗೊಂಡು 1950ರಿಂದ ಸಂವಿಧಾನ ಜಾರಿಯಾದ ಬಳಿಕ ಜಾತಿ, ಲಿಂಗ, ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಕಾನೂನಿನಲ್ಲಿ ಜಾತೀಯತೆ ನಿರ್ಮೂಲನೆಗೊಳಿಸಿದೆಯಾದರೂ, ಆಧುನಿಕ ಭಾರತದಲ್ಲಿ ಸುಪ್ತವಾಗಿ ಜಾತೀಯತೆ ಜೀವಂತವಾಗಿದೆ. 

ಜಾತಿ ಆಧಾರದಲ್ಲಿ ಕ್ರಿಕೆಟ್‌ ಟೂರ್ನಿ ನಡೆಸಿದವರ ಮೇಲೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ.